ಸುಪ್ರೀಂ ತೀರ್ಪಿನ ಮುನ್ನಾದಿನ ಬಿಸಿಸಿಐ ಕಚೇರಿಗೆ ಚೌಧರಿ ಭೇಟಿ

Update: 2017-01-23 17:47 GMT

ಮುಂಬೈ, ಜ.23: ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ ಮುಂಬೈನಲ್ಲಿರುವ ಮುಖ್ಯ ಕಚೇರಿಗೆ ಸೋಮವಾರ ತೆರಳಿ ಅರ್ಧದಿನ ಅಲ್ಲೇ ಕಳೆದರು. ಸುಪ್ರೀಂಕೋರ್ಟ್ ಬಿಸಿಸಿಐಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಕುರಿತಂತೆ ತೀರ್ಪು ನೀಡುವ ಮುನ್ನಾದಿನ ಚೌಧರಿ ಬಿಸಿಸಿಐ ಕಚೇರಿಗೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

 ಅನುರಾಗ್ ಠಾಕೂರ್ ಹಾಗೂ ಅಜಯ ಶಿರ್ಕೆಯವರನ್ನು ಸುಪ್ರೀಂಕೋರ್ಟ್ ಕ್ರಮವಾಗಿ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನದಿಂದ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಖಜಾಂಚಿ ಚೌಧರಿ ಹಾಗೂ ಜೊತೆ ಕಾರ್ಯದರ್ಸಿ ಅಮಿತಾಬ್‌ಚೌಧರಿ ತಮ್ಮ ಅವಧಿಯನ್ನು ಪೂರೈಸಲಿದ್ದಾರೆ. ಜ.20 ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಚೌಧರಿದ್ವಯರು ಬಿಸಿಸಿಐನಲ್ಲಿ ಮುಂದುವರಿಯಲು ಅರ್ಹರಾಗಿದ್ದು, ಕ್ರಿಕೆಟ್ ಮಂಡಳಿಯಲ್ಲಿ ಪದಾಧಿಕಾರಿಯಾಗಿ 9 ವರ್ಷ ಪೂರ್ಣಗೊಳಿಸಿಲ್ಲ ಎಂದು ಹೇಳಿತ್ತು.

ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಬಿಸಿಸಿಐಗೆ ಹೊಸ ಚುನಾವಣೆ ನಡೆಯುವ ತನಕ ಬಿಸಿಸಿಐ ಕಾರ್ಯಚಟುವಟಿಕೆ ನೋಡಿಕೊಳ್ಳಲು ಮಂಗಳವಾರ ಆಡಳಿತಾಧಿಕಾರಿಗಳ ಸಮಿತಿ ನೇಮಕ ಮಾಡಲಾಗುತ್ತದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News