×
Ad

ಸಹಾ ದ್ವಿಶತಕ, ಶೇಷ ಭಾರತಕ್ಕೆ ಇರಾನಿ ಕಪ್

Update: 2017-01-24 13:43 IST

ಮುಂಬೈ, ಜ.24: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ದಿಮಾನ್ ಸಹಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಿಸಿದ ಜೀವನಶ್ರೇಷ್ಠ ಇನಿಂಗ್ಸ್(203) ನೆರವಿನಿಂದ ಅತ್ಯುತ್ತಮ ಪ್ರದರ್ಶನ ನೀಡಿದ ಶೇಷ ಭಾರತ ತಂಡ ರಣಜಿ ಚಾಂಪಿಯನ್ ಗುಜರಾತ್ ತಂಡವನ್ನು ಮಣಿಸಿ ಇರಾನಿ ಕಪ್‌ನ್ನು ಎತ್ತಿ ಹಿಡಿದಿದೆ.

ಗೆಲ್ಲಲು 379 ರನ್ ಗುರಿ ಪಡೆದಿದ್ದ ಶೇಷ ಭಾರತ ಮಂಗಳವಾರ ನಡೆದ ಐದನೆ ಹಾಗೂ ಅಂತಿಮ ದಿನದಾಟದಲ್ಲಿ ಇನ್ನೂ ಎರಡು ಸೆಶನ್‌ಗಳು ಬಾಕಿ ಇರುವಾಗಲೇ ಜಯಭೇರಿ ಬಾರಿಸಿತು. ಸಹಾ ಹಾಗೂ ನಾಯಕ ಚೇತೇಶ್ವರ ಪೂಜಾರ(ಅಜೇಯ 116) ಶೇಷ ಭಾರತ ತಂಡ ಆರು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಲು ಮಹತ್ವದ ಕೊಡುಗೆ ನೀಡಿದರು.

4 ವಿಕೆಟ್ ನಷ್ಟಕ್ಕೆ 266 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಶೇಷ ಭಾರತ ತಂಡ ಲಂಚ್ ವಿರಾಮಕ್ಕೆ ಮೊದಲೇ 103.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 379 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕ್ರಮವಾಗಿ 123 ಹಾಗೂ 83 ರನ್‌ನಿಂದ ಐದನೆ ದಿನದಾಟವನ್ನು ಮುಂದುವರಿಸಿದ ಸಹಾ ಹಾಗೂ ಪೂಜಾರ 78.5 ಓವರ್‌ಗಳಲ್ಲಿ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 316 ರನ್ ದಾಖಲಿಸಿದರು. ಇದು ಟೂರ್ನಿಯ ಇತಿಹಾಸದಲ್ಲಿ ಎರಡನೆ ಶ್ರೇಷ್ಠ ಜೊತೆಯಾಟವಾಗಿದೆ.

1990-91ರಲ್ಲಿ ಬೆಂಗಳೂರಿನಲ್ಲಿ ಮುಂಬೈನ ಪರ ಶೇಷ ಭಾರತದ ವಿರುದ್ಧ ರವಿ ಶಾಸ್ತ್ರಿ ಹಾಗೂ ಪ್ರವೀಣ್ ಆಮ್ರೆ 4ನೆ ವಿಕೆಟ್‌ಗೆ 327 ರನ್ ಜೊತೆಯಾಟ ನಡೆಸಿದ್ದರು. ಸಹಾ-ಪೂಜಾರ ರಣಜಿ ಚಾಂಪಿಯನ್ ಗುಜರಾತ್ ಬೌಲರ್‌ಗಳಿಂದ ಯಾವ ಹಂತದಲ್ಲೂ ಸವಾಲು ಎದುರಿಸಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ 132 ರನ್ ಮುನ್ನಡೆ ಪಡೆದ ಹೊರತಾಗಿಯೂ ಗುಜರಾತ್ ಗೆಲುವಿನಿಂದ ವಂಚಿತವಾಯಿತು. ಕರಣ್ ಪಟೇಲ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಬಂಗಾಳದ ಬ್ಯಾಟ್ಸ್‌ಮನ್ ಸಹಾ ಚೊಚ್ಚಲ ದ್ವಿಶತಕ ಪೂರೈಸಿದರು. 272 ಎಸೆತಗಳನ್ನು ಎದುರಿಸಿದ ಸಹಾ 6 ಸಿಕ್ಸರ್, 26 ಬೌಂಡರಿಗಳ ನೆರವಿನಿಂದ ಅಜೇಯ 203 ರನ್ ಗಳಿಸಿದರು.

ಟೂರ್ನಿಯ ಇತಿಹಾಸದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಇದಾಗಿದೆ. ಅಜೇಯ 203 ರನ್ ಗಳಿಸಿದ ಸಹಾ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. 7 ವರ್ಷಗಳ ಹಿಂದೆ ಕೋಲ್ಕತಾದಲ್ಲಿ ಅಸ್ಸಾಂ ವಿರುದ್ಧ 178 ರನ್ ಗಳಿಸಿದ್ದು ಈ ವರೆಗಿನ ಸಾಧನೆ.

ಮುಂದಿನ ತಿಂಗಳು ಹೈದರಾಬಾದ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆಗಾರರು ತಂಡ ಆಯ್ಕೆ ಮಾಡುವ ಮೊದಲು ಸಹಾ ಭರ್ಜರಿ ಬ್ಯಾಟಿಂಗ್‌ನಿಂದ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.

ಸಹಾ ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೆ ಪಂದ್ಯ ಆಡುವಾಗ ಗಾಯಗೊಂಡಿದ್ದರು. ಸಹಾ ಬದಲಿಗೆ ಗುಜರಾತ್ ನಾಯಕ ಪಾರ್ಥಿವ್ ಪಟೇಲ್ ಬಹುದಿನದ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದರು. ಪಾರ್ಥಿಲ್ ಪಟೇಲ್ ಗುಜರಾತ್ ತಂಡ ರಣಜಿ ಫೈನಲ್‌ನಲ್ಲಿ ಮುಂಬೈ ತಂಡವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಜಯಿಸಲು ಕಾರಣರಾಗಿದ್ದರು.

 ಶೇಷ ಭಾರತ ತಂಡ ನಾಲ್ಕನೆ ದಿನವಾದ ಸೋಮವಾರ ಆಟ ಕೊನೆಗೊಳ್ಳುವಾಗ ಗೆಲುವಿಗೆ 113 ರನ್ ಗಳಿಸಬೇಕಾಗಿತ್ತು. ಸಹಾ ಹಾಗೂ ಪೂಜಾರ ಕ್ರೀಸ್‌ನಲ್ಲಿದ್ದ ಕಾರಣ ಹೆಚ್ಚು ಕಡಿಮೆ ಗೆಲುವನ್ನು ದೃಢಪಡಿಸಿಕೊಂಡಿತ್ತು. ತಂಡ 63 ರನ್‌ಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದಾಗ ಒಂದಾದ ಸಹಾ-ಪೂಜಾರ ಜೋಡಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು.

ಮಂಗಳವಾರ ಬೆಳಗ್ಗೆ 83 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ನಾಯಕ ಪೂಜಾರ ಈ ಋತುವಿನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6ನೆ ಶತಕ ಪೂರೈಸಿದರು. ಇದರಲ್ಲಿ 3 ಟೆಸ್ಟ್ ಶತಕವೂ ಸೇರಿದೆ. ಒಟ್ಟಾರೆ ಇದು ಅವರ 37ನೆ ಶತಕವಾಗಿತ್ತು. ರಾಜ್‌ಕೋಟ್ ಬ್ಯಾಟ್ಸ್‌ಮನ್ ಪೂಜಾರ 238 ಎಸೆತಗಳಲ್ಲಿ 16 ಬೌಂಡರಿ ಬಾರಿಸಿ ಅಜೇಯ 116 ರನ್ ಗಳಿಸಿದ್ದರು.

ಶೇಷ ಭಾರತ ತಂಡ ಕಳೆದ 19 ಆವೃತ್ತಿಯಲ್ಲಿ 15ನೆ ಬಾರಿ ಇರಾನ್ ಕಪ್‌ನ್ನು ಗೆದ್ದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಮೊದಲ ಇನಿಂಗ್ಸ್: 358

ಗುಜರಾತ್ ಎರಡನೆ ಇನಿಂಗ್ಸ್:246

ಶೇಷ ಭಾರತ ಮೊದಲ ಇನಿಂಗ್ಸ್: 226

ಶೇಷ ಭಾರತ ಎರಡನೆ ಇನಿಂಗ್ಸ್: 103.1 ಓವರ್‌ಗಳಲ್ಲಿ 379

(ಸಹಾ ಅಜೇಯ 203, ಪೂಜಾರ ಅಜೇಯ 116, ಹಾರ್ದಿಕ್ ಪಟೇಲ್ 2-104)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News