ಸಾನಿಯಾ-ಬೋಪಣ್ಣ ಮುಖಾಮುಖಿ
ಮೆಲ್ಬೋರ್ನ್, ಜ.24: ಭಾರತದ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಇಲ್ಲಿ ಮಂಗಳವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಹಾಗೂ ಅವರ ಕೆನಡಾದ ಜೊತೆಗಾರ್ತಿ ಗಾಬ್ರೆಲಾ ಡಾಬ್ರೊಸ್ಕಿ ಅವರು ಐದನೆ ಶ್ರೇಯಾಂಕದ ಜೋಡಿ ಯಂಗ್-ಜಾನ್ ಚಾನ್ ಹಾಗೂ ಲುಕಾಸ್ ಕುಬಾಟ್‌ರನ್ನು 6-4, 5-7, 10-3 ಸೆಟ್‌ಗಳ ಅಂತರದಿಂದ ಮಣಿಸಿದರು.
ಆ ನಂತರ ನಡೆದ ಮತ್ತೊಂದು ಎರಡನೆ ಸುತ್ತಿನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಹಾಗೂ ಅವರ ಕ್ರೊಯೇಷಿಯ ಜೊತೆಗಾರ ಇವಾನ್ ಡೊಡಿಗ್ ದ್ವಿತೀಯಶ್ರೇಯಾಂಕದ ಸೈಸೈ ಝೆಂಗ್ ಹಾಗೂ ಅಲೆಕ್ಸಾಂಡರ್ ಪಿಯಾ ವಿರುದ್ಧ 2-6, 6-3, 10-6 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ಸಾನಿಯಾ-ಬೋಪಣ್ಣ ಕ್ವಾರ್ಟರ್‌ಫೈನಲ್‌ಗೆ ತಲುಪಿರುವ ಕಾರಣ ಭಾರತದ ಓರ್ವ ಟೆನಿಸ್ ತಾರೆ ಕ್ವಾರ್ಟರ್‌ಫೈನಲ್ ತಲುಪುವುದು ಗ್ಯಾರಂಟಿ. ಒಂದುವೇಳೆ ಲಿಯಾಂಡರ್ ಪೇಸ್ ಹಾಗೂ ಅವರ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್ ಕ್ವಾರ್ಟರ್ ಫೈನಲ್‌ನಲ್ಲಿ ಜಯ ಸಾಧಿಸಲು ಸಫಲರಾದರೆ ಮತ್ತೊಮ್ಮೆ ಇಬ್ಬರು ಭಾರತೀಯರು ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಾರೆ.
ಪೇಸ್ ಹಾಗೂ ಹಿಂಗಿಸ್ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಳೀಯ ಫೇವರಿಟ್‌ಗಳಾದ ಸಮಂತಾ ಸ್ಟೋಸರ್ ಹಾಗೂ ಸ್ಯಾಮ್ ಗ್ರಾತ್‌ರನ್ನು ಎದುರಿಸಲಿದ್ದಾರೆ.
ಇದೇ ವೇಳೆ ಜೂನಿಯರ್ ಸ್ಪರ್ಧೆಗಳಲ್ಲಿ ಭಾರತದ ಸಿದ್ದಾಂತ್ ಬಂಥಿಯ ಟರ್ಕಿಯ ಕಾಯಾ ಗೋರೆ ಜೊತೆಗೂಡಿ ಬಾಲಕರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಸಿದ್ದಾಂತ್-ಕಾಯಾ ಜೋಡಿ 6ನೆ ಶ್ರೇಯಾಂಕದ ಝಿಝೌ ಬರ್ಗ್ಸ್ ಹಾಗೂ ಶೈ ಒಲಿಲ್‌ರನ್ನು 6-3, 7-6(6) ಸೆಟ್‌ಗಳ ಅಂತರದಿಂದ ಮಣಿಸಿದರು.