ದಕ್ಷಿಣ ಆಫ್ರಿಕ ನೆಲದಲ್ಲಿ ಟ್ವೆಂಟಿ-20 ಸರಣಿ ಜಯಿಸಿದ ಶ್ರೀಲಂಕಾ
ಕೇಪ್‌ಟೌನ್, ಜ.26: ನಿರೊಶನ್ ಡಿಕ್‌ವೆಲ್ಲಾ ದಾಖಲಿಸಿದ ನಿರ್ಣಾಯಕ 68 ರನ್ ನೆರವಿನಿಂದ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಟ್ವೆಂಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ. ಸಿಂಹಳೀಯರು ಆಫ್ರಿಕಾ ನೆಲದಲ್ಲಿ ಮೊತ್ತ ಮೊದಲ ಬಾರಿ ಚುಟುಕು ಕ್ರಿಕೆಟ್‌ನಲ್ಲಿ ಸರಣಿ ಜಯಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾದ ಎಬಿ ಡಿವಿಲಿಯರ್ಸ್(63) ಸಾಹಸದಿಂದ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ತಂಡಕ್ಕೆ ಮೂರನೆ ಟ್ವೆಂಟಿ-20 ಪಂದ್ಯದ ಗೆಲುವಿಗೆ 170 ರನ್ ಗುರಿ ನೀಡಿತು.
ಗೆಲ್ಲಲು ಸವಾಲಿನ ಮೊತ್ತ ಪಡೆದ ಶ್ರೀಲಂಕಾ ತಂಡ ಡಿಕ್‌ವೆಲ್ಲಾ ಹಾಗೂ ಧನಂಜಯ್ ಸಿಲ್ವಾ(19)ಸೇರಿಸಿದ 71 ರನ್ ಜೊತೆಯಾಟ ಹಾಗೂ ಸೀಕುಗೆ ಪ್ರಸನ್ನ ಬಾರಿಸಿದ 37 ರನ್ ನೆರವಿನಿಂದ ಒಂದು ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.
ಈ ಫಲಿತಾಂಶದ ಮೂಲಕ ಶ್ರೀಲಂಕಾ ತಂಡ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ದಕ್ಷಿಣ ಆಫ್ರಿಕ ಐದು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ಲಂಕೆಯ ಗೆಲುವಿಗೆ ಪರೋಕ್ಷವಾಗಿ ನೆರವಾಯಿತು.
ಟಾಸ್ ಜಯಿಸಿದ ಆತಿಥೇಯರು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕಳೆದ ವರ್ಷ ಮೊಣಕೈಗೆ ಗಾಯವಾದ ಬಳಿಕ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ವಿಲಿಯರ್ಸ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಹೆಂಡ್ರಿಕ್ಸ್‌ರೊಂದಿಗೆ 2ನೆ ವಿಕೆಟ್‌ಗೆ 71 ರನ್ ಜೊತೆಯಾಟ ನಡೆಸಿದರು.
4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಕುಸಿತ ಕಂಡ ದಕ್ಷಿಣ ಆಫ್ರಿಕ ಮಾಂಗ್ಲಿಸೊ ಮಾನ್‌ಸೆಲ್ 15 ಎಸೆತಗಳಲ್ಲಿ ಬಾರಿಸಿ ಅಜೇಯ 32 ರನ್ ನೆರವಿನಿಂದ 5 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡದ ಪರ ಡಿಕ್‌ವೆಲ್ಲಾ ಮೊದಲ ವಿಕೆಟ್‌ಗೆ 36 ರನ್ ಸೇರಿಸಿದರು. ಆ ಬಳಿಕ ಡಿಸಿಲ್ವಾರೊಂದಿಗೆ 3ನೆ ವಿಕೆಟ್‌ಗೆ 71 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ದಕ್ಷಿಣ ಆಫ್ರಿಕದ ಸ್ಪಿನ್ನರ್ ಇಮ್ರಾನ್‌ತಾಹಿರ್ ಒಂದೇ ಓವರ್‌ನಲ್ಲಿ ಡಿಕ್‌ವೆಲ್ಲಾ ಹಾಗೂ ಡಿಸಿಲ್ವಾ ವಿಕೆಟ್‌ನ್ನು ಕಬಳಿಸಿದರು. 18 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದರು. ಆದರೆ ಶ್ರೀಲಂಕಾ ಪಟ್ಟು ಸಡಿಲಿಸದೇ ಜಯಭೇರಿ ಬಾರಿಸಿತು.
16 ಎಸೆತಗಳ ಇನಿಂಗ್ಸ್‌ಗಳಲ್ಲಿ 3 ಭರ್ಜರಿ ಸಿಕ್ಸರ್ ಬಾರಿಸಿದ ಪ್ರಸನ್ನ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು. ಅಂತಿಮ ಓವರ್‌ನಲ್ಲಿ 11 ರನ್ ಅಗತ್ಯವಿದ್ದಾಗ ಆಲ್‌ರೌಂಡರ್ ಅಸೆಲಾ ಗುಣರತ್ನ ವೇಗದ ಬೌಲರ್ ಡ್ಯಾನ್ ಪ್ಯಾಟರ್‌ಸನ್ ಎಸೆತದಲ್ಲಿ ಎರಡು ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.