×
Ad

ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸಹೋದರಿಯರ ಸೆಣಸಾಟ

Update: 2017-01-26 22:49 IST

  ಮೆಲ್ಬೋರ್ನ್, ಜ.26: ದಾಖಲೆ 23ನೆ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಮುನ್ನುಗ್ಗುತ್ತಿರುವ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್‌ರನ್ನು ಎದುರಿಸಲಿದ್ದಾರೆ. ಈ ಮೂಲಕ ದೀರ್ಘ ಸಮಯದ ಬಳಿಕ ಅವೆುರಿಕದ ಸಹೋದರಿಯರು ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.

ವನಿತೆಯರ ಸಿಂಗಲ್ಸ್ ಫೈನಲ್ ಪಂದ್ಯ ಶನಿವಾರ ನಡೆಯಲಿದೆ.

ವಿಶ್ವದ ನಂ.2ನೆ ಆಟಗಾರ್ತಿ ಸೆರೆನಾ ಗುರುವಾರ ಇಲ್ಲಿ ಕೇವಲ 50 ನಿಮಿಷಗಳ ಕಾಲ ನಡೆದ ಸೆಮಿ ಫೈನಲ್‌ನಲ್ಲಿ ಕ್ರೊಯೇಷಿಯದ ಶ್ರೇಯಾಂಕರಹಿತ ಆಟಗಾರ್ತಿ ಮಿರ್ಜಾನಾ ಲೂಸಿಕ್ ಬೊರಾನಿ ಅವರನ್ನು 6-2, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.

ಸೆರೆನಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಏಳನೆ ಪ್ರಶಸ್ತಿಯತ್ತ ಚಿತ್ತವಿರಿಸಿದ್ದು, ಮುಕ್ತ ಯುಗದಲ್ಲಿ ಸ್ಟೆಫಿಗ್ರಾಫ್ ಗೆದ್ದುಕೊಂಡಿದ್ದ 22 ಗ್ರಾನ್‌ಸ್ಲಾಮ್ ಟೂರ್ನಿಯ ದಾಖಲೆ ಮುರಿಯಲು ಎದುರು ನೋಡುತ್ತಿದ್ದಾರೆ.

 ಒಂದು ವೇಳೆ ಸೆರೆನಾ ಪ್ರಶಸ್ತಿ ಗೆದ್ದುಕೊಂಡರೆ ಮತ್ತೊಮ್ಮೆ ವಿಶ್ವದ ನಂ.1 ಆಟಗಾರ್ತಿಯಾಗಿ ಹೊರಹೊಮ್ಮುತ್ತಾರೆ. ಕಳೆದ ವರ್ಷಾಂತ್ಯದಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ ಅವರು ಸೆರೆನಾ ಕೈಯಿಂದ ನಂ.1 ಸ್ಥಾನ ಕಸಿದುಕೊಂಡಿದ್ದರು.

ಸೆರೆನಾರ ಹಿರಿಯ ಸಹೋದರಿ ವೀನಸ್ ಮತ್ತೊಂದು ಸೆಮಿ ಫೈನಲ್‌ನಲ್ಲಿ ತಮ್ಮದೇ ದೇಶದ ಕೊಕೊ ವ್ಯಾಂಡ್‌ವೆಘ್‌ರನ್ನು 6-7(3), 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಒಂದೇ ಕುಟುಂಬದ ಇಬ್ಬರು ಆಟಗಾರ್ತಿಯರು ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿದ್ದಾರೆ. ವಿಲಿಯಮ್ಸ್ ಸಹೋದರಿಯರು 8 ವರ್ಷಗಳ ಬಳಿಕ 9ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಸೆಣಸಾಡುತ್ತಿದ್ದಾರೆ. ಸೆರೆನಾ ಸಹೋದರಿಯ ವಿರುದ್ಧ 6-2 ದಾಖಲೆ ಹೊಂದಿದ್ದಾರೆ.

‘‘ನನ್ನ ಹಿರಿಯ ಸಹೋದರಿ ವೀನಸ್ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಆಕೆಯೇ ನನಗೆ ಸ್ಫೂರ್ತಿ. ಆಕೆಯೇ ನನ್ನ ಪ್ರಚಂಚ, ಜೀವನ. ಆಕೆ ನನಗೂ ಎಲ್ಲವೂ. ಇಬ್ಬರೂ ಫೈನಲ್‌ಗೆ ತಲುಪಿರುವುದಕ್ಕೆ ನನಗೆ ಸಂತೋಷವಾಗಿಲ್ಲ. ಆದರೆ, ನನ್ನ ದೊಡ್ಡ ಕನಸೊಂದು ನನಸಾಗಿದೆ’’ ಎಂದು ಸೆರೆನಾ ನುಡಿದರು.

ವಿಲಿಯಮ್ಸ್ ಸಹೋದರಿಯರು 19 ವರ್ಷಗಳ ಹಿಂದೆ ವಿಂಬಲ್ಡನ್ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಪರಸ್ಪರ ಸೆಣಸಾಡಿದ್ದರು. ಆ ಬಳಿಕ ಇಬ್ಬರ ವೃತ್ತಿಜೀವನದಲ್ಲಿ ಹಲವು ತಿರುವುಗಳಾದವು.ಸೆರೆನಾ ವಿಲಿಯಮ್ಸ್ 22 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಫೆಡರರ್ ಫೈನಲ್‌ಗೆ

ಮೆಲ್ಬೋರ್ನ್, ಜ.26: ತಮ್ಮದೇ ದೇಶದ ಸ್ಟಾನ್ ವಾವ್ರಿಂಕರನ್ನು ಐದು ಸೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದ ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.

 ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ 3 ಗಂಟೆ, 5 ನಿಮಿಷಗಳ ಹೋರಾಟದಲ್ಲಿ ವಾವ್ರಿಂಕರನ್ನು 7-5, 6-3, 1-6, 4-6, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಫೆಡರರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 43 ವರ್ಷಗಳ ಬಳಿಕ ಫೈನಲ್‌ಗೆ ತಲುಪಿದ ಹಿರಿಯ ಆಟಗಾರ ಎನಿಸಿಕೊಂಡರು. 1974ರಲ್ಲಿ ಆಸ್ಟ್ರೇಲಿಯದ ಕೆನ್ ರಾಸ್‌ವೆಲ್(39 ವರ್ಷ, 310 ದಿನಗಳು) ಯುಎಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ 6ನೆ ಬಾರಿ, ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 28ನೆ ಬಾರಿ ಫೈನಲ್‌ಗೆ ತಲುಪಿರುವ ಫೆಡರರ್ ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅಥವಾ ಗ್ರಿಗೊರ್ ಡಿಮಿಟ್ರೊವ್‌ರನ್ನು ಎದುರಿಸಲಿದ್ದಾರೆ.

ಪೇಸ್-ಹಿಂಗಿಸ್ ಸವಾಲು ಅಂತ್ಯ

ಮೆಲ್ಬೋರ್ನ್, ಜ.26: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಹಾಗೂ ಅವರ ಸ್ವಿಸ್ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ನೇರ ಸೆಟ್‌ಗಳಿಂದ ಸೋತು ನಿರ್ಗಮಿಸಿದ್ದಾರೆ.

  ಇಲ್ಲಿ ಗುರುವಾರ 55 ನಿಮಿಷಗಳ ಕಾಲ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಪೇಸ್ ಹಾಗೂ ಹಿಂಗಿಸ್ ಸ್ಥಳೀಯ ಜೋಡಿ ಸ್ಯಾಮ್ ಗ್ರಾತ್ ಹಾಗೂ ಸಮಂತಾ ಸ್ಟೋಸರ್ ವಿರುದ್ಧ 3-6, 2-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಗ್ರಾತ್ ಹಾಗೂ ಸ್ಟೋಸರ್ ಸೆಮಿಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಭಾರತದ ಸಾನಿಯಾ ಮಿರ್ಝಾ ಹಾಗೂ ಕ್ರೊಯೇಷಿಯದ ಇವಾನ್ ಡೊಡಿಗ್‌ರನ್ನು ಎದುರಿಸಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News