×
Ad

ಪಾಕ್ ಧಾರ್ಮಿಕ ಬೋಧಕ ಜುನೈದ್ ಜಮ್ಶೆಡ್ ಭಾವಚಿತ್ರ ಪ್ರದರ್ಶನ: ತಾಹಿರ್‌ಗೆ ಐಸಿಸಿ ಛೀಮಾರಿ

Update: 2017-01-27 20:54 IST

ಜೋಹಾನ್ಸ್‌ಬರ್ಗ್, ಜ.27: ವಿಕೆಟ್ ಪಡೆದ ಸಂಭ್ರಮಾಚರಣೆಯ ವೇಳೆ ಪಾಕಿಸ್ತಾನದ ಧಾರ್ಮಿಕ ಬೋಧಕ ಜುನೈದ್ ಜೆಮ್ಶೆಡ್ ಚಿತ್ರವಿರುವ ಶರ್ಟ್‌ನ್ನು ಪ್ರದರ್ಶಿಸಿದ ದಕ್ಷಿಣ ಆಫ್ರಿಕದ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್‌ಗೆ ಐಸಿಸಿ ಛೀಮಾರಿ ಹಾಕಿದೆ.

  ಇತ್ತೀಚೆಗೆ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಶ್ರೀಲಂಕಾದ ಬ್ಯಾಟ್ಸ್‌ಮನ್ ಅಸೆಲಾ ಗುಣರತ್ನೆ ವಿಕೆಟ್‌ನ್ನು ಉರುಳಿಸಿದ ತಾಹಿರ್ ಮೈದಾನದಲ್ಲಿ ಓಡುತ್ತಾ ತನ್ನದೇ ಶೈಲಿಯಲ್ಲಿ ಸಂಭ್ರಮಾಚರಿಸಿದ್ದಲ್ಲದೆ ತಾನು ಧರಿಸಿದ್ದ ತಂಡದ ಸಮವಸ್ತ್ರವನ್ನು ತೆಗೆದು ಜುನೈದ್ ಜೆಮ್ಶೆಡ್ ಚಿತ್ರವಿರುವ ಟೀ-ಶರ್ಟ್‌ನ್ನು ಪ್ರದರ್ಶಿಸಿದ್ದರು.

  ಜಮ್ಶೆಡ್ ಡಿಸೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆದ ಭೀಕರ ವಿಮಾನ ಅಪಘಾತ ವೊಂದರಲ್ಲಿ ಸಾವನ್ನಪ್ಪಿದ್ದರು. ಈ ವಿಷಯದ ಕುರಿತು ಐಸಿಸಿ ಏನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತಾಹಿರ್ ಅವರು ಪಾಕ್ ಧಾರ್ಮಿಕ ಬೋಧಕನ ಚಿತ್ರವಿರುವ ಶರ್ಟ್‌ನ್ನು ಪ್ರದರ್ಶಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಅನುಮತಿಯಿಲ್ಲದೆ ವೈಯಕ್ತಿಕ ಸಂದೇಶವನ್ನು ನೀಡಿದ್ದಕ್ಕೆ ಸೆಕ್ಷನ್ ಜಿ1 ವಸ್ತ್ರ ಹಾಗೂ ಕ್ರಿಕೆಟ್ ಸಲಕರಣೆಗೆ ಸಂಬಂಧಿಸಿದ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ತಾಹಿರ್‌ಗೆ ಐಸಿಸಿ ಛೀಮಾರಿ ಹಾಕಿದೆ.

ಆಟಗಾರರು ಅಥವಾ ತಂಡದ ಅಧಿಕಾರಿಗಳು ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಯಿಂದ ಮುಂಚಿತವಾಗಿ ಅನುಮತಿ ಪಡೆಯದೇ ಕೈಪಟ್ಟಿ , ಸಮವಸ್ತ್ರ, ಅಥವಾ ಕ್ರಿಕೆಟ್ ಸಾಧನಗಳ ಮೂಲಕ ವೈಯಕ್ತಿಕ ಸಂದೇಶವನ್ನು ನೀಡುವಂತಿಲ್ಲ. ರಾಜಕೀಯ, ಧಾರ್ಮಿಕತೆ ಅಥವಾ ಜನಾಂಗೀಯ ನಿಂದನೆಗೆ ಸಂಬಂಧಿಸಿ ಸಂದೇಶ ನೀಡಲು ಐಸಿಸಿ ಅವಕಾಶ ನೀಡುವುದಿಲ್ಲ.

37ರ ಹರೆಯದ ತಾಹಿರ್ ತನ್ನ ತಪ್ಪನ್ನು ಒಪ್ಪಿಕೊಂಡ ಕಾರಣ ಐಸಿಸಿ ಈ ವಿಷಯದ ಕುರಿತು ಯಾವುದೇ ವಿಚಾರಣೆಯನ್ನು ನಡೆಸದಿರಲು ನಿರ್ಧರಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News