×
Ad

ನಿಧಾನಗತಿಯ ಬೌಲಿಂಗ್: ಅಝರ್‌ಗೆ ಒಂದು ಪಂದ್ಯದಿಂದ ಅಮಾನತು

Update: 2017-01-27 23:24 IST

ಅಡಿಲೇಡ್, ಜ.27: ಅಡಿಲೇಡ್ ಓವಲ್‌ನಲ್ಲಿ ಗುರುವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸ್ಲೋ ಓವರ್‌ರೇಟ್ ಕಾಯ್ದುಕೊಂಡಿರುವ ತಪ್ಪಿಗೆ ಪಾಕಿಸ್ತಾನದ ಏಕದಿನ ತಂಡದ ನಾಯಕ ಅಝರ್ ಅಲಿಯವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅಮಾನತು ಹಿನ್ನೆಲೆಯಲ್ಲಿ ಎಪ್ರಿಲ್‌ನಲ್ಲಿ ನಡೆಯಲಿರುವ ಪಾಕಿಸ್ತಾನದ ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಅಲಿ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಪಾಕಿಸ್ತಾನ ನಿಗದಿತ ಸಮಯದಲ್ಲಿ 2 ಓವರ್ ಕಡಿಮೆ ಬೌಲಿಂಗ್ ಮಾಡಿದ್ದು ಕಂಡುಬಂದ ಹಿನ್ನೆಲೆಯಲ್ಲಿ ನಾಯಕ ಅಝರ್‌ಗೆ ಪಂದ್ಯಶುಲ್ಕದಲ್ಲಿ 40 ಶೇ.ದಷ್ಟು ಹಾಗೂ ಆಟಗಾರರಿಗೆ ಪಂದ್ಯಶುಲ್ಕದಲ್ಲಿ 20 ಶೇ. ದಂಡ ವಿಧಿಸಲಾಗಿದೆ. ಅಝರ್ ಗುರುವಾರ ನಡೆದ ಅಡಿಲೇಡ್ ಏಕದಿನದಲ್ಲಿ 12 ತಿಂಗಳೊಳಗೆ 2ನೆ ಬಾರಿ ಸ್ಲೋ ಓವರ್‌ರೇಟ್ ಕಾಯ್ದುಕೊಂಡ ಕಾರಣ ಅಮಾನತುಗೊಂಡಿದ್ದಾರೆ.

ಜ.31 ರಂದು ಆಕ್ಲೆಂಡ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ ಅಝರ್‌ಗೆ ಪಂದ್ಯಶುಲ್ಕದಲ್ಲಿ 20 ಶೇ. ದಂಡ ವಿಧಿಸಲಾಗಿತ್ತು. ನವೆಂಬರ್‌ನಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಪಂದ್ಯಶುಲ್ಕದಲ್ಲಿ 100 ಶೇ.ದಂಡ ವಿಧಿಸಲಾಗಿತ್ತು. ಟೆಸ್ಟ್ ನಾಯಕ ಮಿಸ್ಬಾವುಲ್ ಹಕ್ ಅನುಪಸ್ಥಿತಿಯಲ್ಲಿ ಅಲಿ ಆಗ ಹಂಗಾಮಿ ನಾಯಕನಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News