×
Ad

‘ಭಾರತವೇ ನನಗೆ ತಂದೆಯಿದ್ದಂತೆ, ಕರ್ತವ್ಯದಿಂದ ವಿಮುಖನಾಗಲಾರೆ’

Update: 2017-01-28 21:29 IST

 ಹೊಸದಿಲ್ಲಿ, ಜ.28: ‘‘ನಮ್ಮ ತಂದೆ ಮೊರಾದಾಬಾದ್‌ನಲ್ಲಿ ಇರುವಾಗಲೇ ದೀರ್ಘ ಸಮಯದಿಂದ ಅಸೌಖ್ಯದಿಂದಿದ್ದರು. ಈ ಕಾರಣದಿಂದ ನಾವು ಅವರನ್ನು ಚಿಕಿತ್ಸೆಗಾಗಿ ದಿಲ್ಲಿಗೆ ಕರೆದುಕೊಂಡು ಬಂದಿದ್ದೆವು. ಸಹೋದರ(ಶಮಿ) ಕಳೆದ ತಿಂಗಳು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದರು. ಕುಟುಂಬ ಸದಸ್ಯರು ಆತನ ಬಳಿ ತಂದೆಯ ಜೊತೆ ಇರುವಂತೆ ಕೇಳಿಕೊಂಡಿದ್ದರು. ಆದರೆ, ‘‘ತನ್ನ ಪಾಲಿಗೆ ದೇಶವೇ ತಂದೆಯಿದ್ದಂತೆ, ತಾನು ಕರ್ತವ್ಯದಿಂದ ವಿಮುಖನಾಗಲಾರೆ’’ ಎಂದು ಹೇಳಿದ್ದರು ಎಂಬುದಾಗಿ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿಯ ಸಹೋದರ ಮುಹಮ್ಮದ್ ಆಸೀಫ್ ‘ಸ್ಪೋರ್ಟ್ ಕ್ರೀಡಾ’ಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

 ಹೃದಯಾಘಾತವಾದ ಹಿನ್ನೆಲೆಯಲ್ಲಿ ಶಮಿಯ ತಂದೆ ತೌಸಿಫ್ ಅಲಿ ಅವರನ್ನು ಜ.5 ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅವರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ವಿಷಯ ತಿಳಿದ ಶಮಿ ಭಾರತೀಯ ಟ್ವೆಂಟಿ-20 ತಂಡವನ್ನು ತೊರೆದು ತಂದೆಯ ಅಂತಿಮ ದರ್ಶನ ಪಡೆಯಲು ಧಾವಿಸಿದ್ದರು.

ಮಂಡಿನೋವಿನಿಂದ ಚೇತರಿಸಿಕೊಳ್ಳುತ್ತಿರುವ 27ರ ಪ್ರಾಯದ ಬೌಲರ್ ಶಮಿ ಪ್ರಸ್ತುತ ಬೆಂಗಳೂರಿನ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಭಾರತೀಯ ತಂಡಕ್ಕೆ ವಾಪಸಾಗಲು ಎದುರು ನೋಡುತ್ತಿದ್ದಾರೆ.

‘‘ಶಮಿ ತುಂಬಾ ಭಾವುಕ ವ್ಯಕ್ತಿ. ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿ ಭಾರತೀಯ ತಂಡದ ಕಾರ್ಯಯೋಜನೆಯಲ್ಲಿ ಅತ್ಯಂತ ಮುಖ್ಯವಾಗಿದ್ದ ಕಾರಣ ಶಮಿಗೆ ಸರಣಿಯ ಮೊದಲು ಸಂಪೂರ್ಣ ಫಿಟ್‌ನೆಸ್ ಸಾಬೀತುಪಡಿಸಬೇಕಾಗಿದ್ದ ಕಾರಣ ಅವರು ತಂದೆಯೊಂದಿಗೆ ಸಮಯ ಕಳೆಯಲಾಗದೇ ಅನಿವಾರ್ಯವಾಗಿ ತರಬೇತಿ ಶಿಬಿರಕ್ಕೆ ವಾಪಸಾಗಲು ನಿರ್ಧರಿಸಿದ್ದರು. ಮುಂಬರುವ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ’’ಎಂದು ಆಸೀಫ್ ಹೇಳಿದ್ದಾರೆ.

  ತಂದೆಯವರು ತಮ್ಮ ವೃತ್ತಿ ಬಗ್ಗೆ ಅಪಾರ ಗೌರವ ಹೊಂದಿದ್ದರು. ನಮಗೂ ಹಾಗೆಯೇ ಮಾಡುವಂತೆ ಹೇಳುತ್ತಿದ್ದರು. ಕ್ರಿಕೆಟ್ ಅವರ ರಕ್ತದಲ್ಲಿತ್ತು. ತಂದೆ ವಸಿಂ ಅಕ್ರಂರ ದೊಡ್ಡ ಅಭಿಮಾನಿಯಾಗಿದ್ದರು. ಒತ್ತಡದಲ್ಲಿ ಶಾಂತಚಿತ್ತವಿರುತ್ತಿದ್ದ ಅವರ ನಿಧನದಿಂದ ನಮಗೆಲ್ಲರಿಗೂ ತುಂಬಾ ದುಃಖವಾಗಿದೆ’’ಎಂದು ಆಸೀಫ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News