×
Ad

ಆಯ್ಕೆ ಸಮಿತಿ ಸಭೆ ನಡೆಸದಂತೆ ಅಮಿತಾಭ್ ಚೌಧರಿಗೆ ನಿರ್ಬಂಧ

Update: 2017-01-31 23:46 IST

ಹೊಸದಿಲ್ಲಿ, ಜ.31: ಜೊತೆ ಕಾರ್ಯದರ್ಶಿ ಅಮಿತಾಭ್ ಚೌಧರಿಗೆ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿಯ ಸಭೆ ನಡೆಸಲು ನೂತನ ಆಡಳಿತಾಧಿಕಾರಿಗಳ ಸಮಿತಿ ತಡೆ ಹೇರಿದ್ದು, ಪರಿಣಾಮ ಸಭೆ 4 ಗಂಟೆ ವಿಳಂಬವಾಗಿ ನಡೆಯಿತು.

 ಆಯ್ಕೆ ಸಮಿತಿಯ ಸಭೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಡೆಯಬೇಕಾಗಿತ್ತು. ವಿನೋದ್ ರಾಯ್ ನೇತೃತ್ವದ ನಾಲ್ವರು ಸದಸ್ಯರನ್ನು ಒಳಗೊಂಡ ಬಿಸಿಸಿಐನ ನೂತನ ಆಡಳಿತಾಧಿಕಾರಿಗಳ ಸಮಿತಿಯು ಬಿಸಿಸಿಐ ಕಾರ್ಯದರ್ಶಿ ಚೌಧರಿ ಪಂಚತಾರಾ ಹೊಟೇಲ್‌ನಲ್ಲಿ ಸಭೆ ನಡೆಸಲು ಅವಕಾಶ ನಿರಾಕರಿಸಿದ ಕಾರಣ ಸಭೆ 4 ಗಂಟೆ ವಿಳಂಬವಾಗಿ ನಡೆಯಿತು.

ಮುಂಬೈನ ಉಪನಗರದಲ್ಲಿರುವ ಐಡಿಬಿಐ ಬ್ಯಾಂಕ್‌ನಲ್ಲಿ ಸಭೆ ಸೇರಿದ ಆಡಳಿತಾಧಿಕಾರಿ ಸಮಿತಿ ಆಯ್ಕೆ ಸಮಿತಿ ಸಭೆಯನ್ನು ಚೌಧರಿ ಬದಲಿಗೆ ಸಿಇಒ ರಾಹುಲ್ ಜೊಹ್ರಾ ನಡೆಸಬೇಕೆಂದು ನಿರ್ಧರಿಸಿತು. ಸಿಇಒ ಅಗತ್ಯವಿಲ್ಲ ಎಂಬ ಬಿಸಿಸಿಐ ವಾದವನ್ನು ತಿರಸ್ಕರಿಸಿತು.

‘‘ನಾನು ಸಭೆಯಲ್ಲಿ ಹಾಜರಾಗಲು ಹೊಟೇಲ್‌ಗೆ ಆಗಮಿಸಿ ಕಾಯುತ್ತಿದ್ದೆ. ಆದರೆ ತಾನು ಸಭೆಯಲ್ಲಿ ಭಾಗವಹಿಸಲು ಅನರ್ಹ ಎಂದು ಆಡಳಿತಾಧಿಕಾರಿ ಸಮಿತಿ ತಿಳಿಸಿದೆ. ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು’’ ಎಂದು ಚೌಧರಿ ಮಧ್ಯಾಹ್ನ 12 ಗಂಟೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

‘‘ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಲು ಅಮಿತಾಭ್ ಚೌಧರಿ ದಿಲ್ಲಿಯಲ್ಲಿ ಇಂದು ಹಿರಿಯರ ಆಯ್ಕೆ ಸಮಿತಿ ಸಭೆ ಕರೆದಿದ್ದರು. ತಕ್ಷಣವೇ ಮಧ್ಯಪ್ರವೇಶಿಸಿದ ವಿನೋದ್ ರಾಯ್ ನೇತೃತ್ವದ ಬಿಸಿಸಿಐನ ನೂತನ ಆಡಳಿತಾಧಿಕಾರಿಗಳ ಸಮಿತಿ ಸಭೆ ನಡೆಸದಂತೆ ತಡೆ ಹೇರಿದೆ. ಸಿಇಒ ರಾಹುಲ್ ಜೊಹ್ರಿ ಮುಂಬೈಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂದಿನ ಈ ಘಟನೆಯು ಚೌಧರಿ ಬಿಸಿಸಿಐ ಜೊತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಅನರ್ಹರು ಎನ್ನುವುದನ್ನು ಸಾಬೀತುಪಡಿಸಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಜ್ಞಾನವಿರುವ ವಿಕ್ರಮ್ ಲಿಮಯೆ ಬಿಸಿಸಿಐ ಪ್ರತಿನಿಧಿಯಾಗಿ ದುಬೈಗೆ ತೆರಳಿ ಐಸಿಸಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News