×
Ad

ವಿಂಡೀಸ್‌ನ ಸ್ಟಾರ್ ಆಲ್‌ರೌಂಡರ್ ರಸೆಲ್‌ಗೆ ಒಂದು ವರ್ಷ ನಿಷೇಧ

Update: 2017-02-01 16:36 IST

ಜಮೈಕಾ, ಫೆ.1: ವೆಸ್ಟ್‌ಇಂಡೀಸ್ 2016ರಲ್ಲಿ ಟ್ವೆಂಟಿ-20 ವಿಶ್ವಕಪ್ ಜಯಿಸಲು ಪ್ರಮುಖ ಪಾತ್ರವಹಿಸಿರುವ ಸ್ಟಾರ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್‌ಗೆ ವಿಶ್ವ ಉದ್ದೀಪನಾ ಮದ್ದು ತಡೆ ಘಟಕದ(ವಾಡಾ) ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಸಕ್ರಿಯ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧ ವಿಧಿಸಲಾಗಿದೆ.

2015ರ ಮಾರ್ಚ್‌ನಿಂದ ಸೆಪ್ಟಂಬರ್ ತನಕ ಮೂರು ಬಾರಿ ಡೋಪಿಂಗ್ ಪರೀಕ್ಷೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ 28ರ ಹರೆಯದ ರಸೆಲ್‌ಗೆ 12 ತಿಂಗಳ ಕಾಲ ನಿಷೇಧ ವಿಧಿಸಲು ಜಮೈಕಾದ ಉದ್ದೀಪನಾ ಮದ್ದು ತಡೆ ಘಟಕದ ಸ್ವತಂತ್ರ ಶಿಸ್ತು ಸಮಿತಿ ನಿರ್ಧರಿಸಿದೆ ಎಂದು ಆಸ್ಟ್ರೇಲಿಯದ ಟ್ವೆಂಟಿ-20 ಕ್ಲಬ್ ಬುಧವಾರ ತಿಳಿಸಿದೆ.

ಎರಡು ಬಾರಿ ಟ್ವೆಂಟಿ-20 ವಿಶ್ವಕಪ್ ವಿಜೇತ ಸದಸ್ಯರಾಗಿರುವ ರಸೆಲ್ ನಿಷೇಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಸೆಲ್ ವಿರುದ್ಧ ನಿಷೇಧ ಪ್ರಕ್ರಿಯೆ ಮಂಗಳವಾರ ಆರಂಭವಾಗಿದ್ದು, 2018ರ ಜ.30ಕ್ಕೆ ಕೊನೆಗೊಳ್ಳಲಿದೆ.

ಜಮೈಕಾ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಿಷೇಧದ ಘೋಷಣೆಯಾದಾಗ ರಸೆಲ್ ಕಣ್ಣೀರುಹಾಕಿದ್ದರು ಎಂದು ದಿನಪತ್ರಿಕೆಯೊಂದು ವರದಿ ಮಾಡಿದೆ.

28ರ ಪ್ರಾಯದ ರಸೆಲ್ 2016ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ತಂಡ ಚಾಂಪಿಯನ್‌ಪಟ್ಟಕ್ಕೇರಲು ಮಹತ್ವದ ಕಾಣಿಕೆ ನೀಡಿದ್ದರು.

ರಸೆಲ್ ಈ ವರ್ಷದ ಬಿಗ್‌ಬಾಶ್ ಲೀಗ್‌ನಲ್ಲಿ ಮೊದಲ ಐದು ಪಂದ್ಯಗಳನ್ನು ಆಡಿದ್ದು, ಆಬಳಿಕ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿದಿದ್ದರು. ರಸೆಲ್ ಬದಲಿಗೆ ಸಹ ಆಟಗಾರ ಕಾರ್ಲೊಸ್ ಬ್ರಾತ್‌ವೇಟ್ ಟೂರ್ನಿಯಲ್ಲಿ ಆಡಿದ್ದರು.

ವಿಶ್ವ ಉದ್ದೀಪನಾ ಮದ್ದು ತಡೆ ಘಟಕದ ನಿಯಮದ ಪ್ರಕಾರ ಎಲ್ಲ ಕ್ರೀಡೆಯ ಅಥ್ಲೀಟ್ ಡೋಪಿಂಗ್ ಟೆಸ್ಟ್‌ನ ಒಂದು ಗಂಟೆಯ ಮೊದಲು ಸ್ಥಳೀಯ ಉದ್ದೀಪನಾ ತಡೆ ಘಟಕಕ್ಕೆ ತಾನಿರುವ ಬಗ್ಗೆ ಮಾಹಿತಿ ನೀಡಬೇಕು. ಆದರೆ, 2015ರಲ್ಲಿ ರಸೆಲ್ ಮೂರು ಬಾರಿ ತಾನೆಲ್ಲಿದ್ದೆ ಎನ್ನುವ ಬಗ್ಗೆ ಸ್ಥಳೀಯ ಏಜೆನ್ಸಿಗೆ ಮಾಹಿತಿ ನೀಡದೇ ಇರುವ ಆರೋಪ ಎದುರಿಸುತ್ತಿದ್ದಾರೆ.

ರಸೆಲ್ ಈ ವರ್ಷದ ಬಿಗ್‌ಬಾಶ್ ಲೀಗ್‌ನಲ್ಲಿ ಮೊದಲ ಐದು ಪಂದ್ಯಗಳನ್ನು ಆಡಿದ್ದು, ಆಬಳಿಕ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿದಿದ್ದರು. ರಸೆಲ್ ಬದಲಿಗೆ ಸಹ ಆಟಗಾರ ಕಾರ್ಲೊಸ್ ಬ್ರಾತ್‌ವೇಟ್ ಟೂರ್ನಿಯಲ್ಲಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News