×
Ad

ಬೆಂಗಳೂರಿನಲ್ಲಿ ಚಾಹಲ್ ಕಮಾಲ್; ಭಾರತಕ್ಕೆ ಸರಣಿ ಜಯ

Update: 2017-02-01 22:24 IST

  ಬೆಂಗಳೂರು, ಫೆ.1: ಭಾರತ ಇಲ್ಲಿ ನಡೆದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 75 ರನ್‌ಗಳ ಭರ್ಜರಿ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
  ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 203 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ಸ್ಪಿನ್ನರ್ ಯಜುವೇಂದ್ರ ಚಾಹಲ್(25ಕ್ಕೆ 6) ,ಜಸ್‌ಪ್ರೀತ್ ಬುಮ್ರಾ(14ಕ್ಕೆ 3) ಮತ್ತು ಅಮಿತ್ ಮಿಶ್ರಾ(23ಕ್ಕೆ 1) ದಾಳಿಗೆ ಸಿಲುಕಿ 16.3 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟಾಗಿದೆ. ಚಾಹಲ್ ಟ್ವೆಂಟಿ-20ಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಶ್ವದ ಮೂರನೆ ಬೌಲರ್‌ಎನಿಸಿಕೊಂಡರು. ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಒಂದು ಹಂತದಲ್ಲಿ 13.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 119 ರನ್ ಗಳಿಸಿದ್ದ ಇಂಗ್ಲೆಂಡ್ ಬಳಿಕ 18 ಎಸೆತಗಳಲ್ಲಿ 8 ರನ್‌ಗೆ 8 ವಿಕೆಟ್ ಕಳೆದುಕೊಂಡು ಆಲೌಟಾಗಿದೆ. ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಬಿಲ್ಲಿಂಗ್ಸ್‌ನ್ನು(0) ಖಾತೆ ತೆರೆಯಲು ಅವಕಾಶ ನೀಡದೆ ಮೊದಲ ಎಸೆತದಲ್ಲಿ ಪೆವಿಲಿಯನ್ ಅಟ್ಟಿದ್ದ ಚಾಹಲ್ ಇಂಗ್ಲೆಂಡ್‌ಗೆ ಎಚ್ಚರಿಕೆ ನೀಡಿದ್ದರು. ಎರಡನೆ ವಿಕೆಟ್‌ಗೆ ಜೇಸನ್ ರಾಯ್ ಮತ್ತು ರೂಟ್ 47 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟಿದ್ದರು. ಇಂಗ್ಲೆಂಡ್ 6 ಓವರ್‌ಗಳಲ್ಲಿ 55 ರನ್ ಗಳಿಸುವ ಮೂಲಕ ಉತ್ತಮ ರನ್ ಧಾರಣೆ ಕಾಯ್ದುಕೊಂಡಿತ್ತು. 6.2 ಓವರ್‌ನಲ್ಲಿ ಇಂಗ್ಲೆಂಡ್‌ನ ರಾಯ್ ಅವರು ಮಿಶ್ರಾ ಎಸೆತದಲ್ಲಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದರು.
ರಾಯ್ 32 ರನ್(23ಎ, 4ಬೌ,1ಸಿ) ಗಳಿಸಿ ಔಟಾದರು. ಬಳಿಕ ಮೂರನೆ ವಿಕೆಟ್‌ಗೆ ನಾಯಕ ಮೊರ್ಗನ್ ಮತ್ತು ರೂಟ್ ಉತ್ತಮ ಜೊತೆಯಾಟ ನೀಡಿದರು. ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 3ನೆ ವಿಕೆಟ್‌ಗೆ 64 ರನ್ ಸೇರಿಸಿದರು. ರೈನಾರ 12ನೆ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದರು. 13ನೆ ಓವರ್‌ನ ಮುಕ್ತಾಯಕ್ಕೆ ಇಂಗ್ಲೆಂಡ್ 2 ವಿಕೆಟ್ ನಷ್ಟದಲ್ಲಿ 117 ರನ್ ಗಳಿಸಿತ್ತು.
14ನೆ ಓವರ್‌ನಲ್ಲಿ ಚಾಹಲ್ ದಾಳಿಗಿಳಿದು 3ನೆ ಎಸೆತದಲ್ಲಿ ನಾಯಕ ಮೊರ್ಗನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಮೊರ್ಗನ್ 40 ರನ್(21ಎ, 2ಬೌ,3ಸಿ) ಬಳಿಕ ಗಳಿಸಿ ನಿರ್ಗಮಿಸಿದರು. ಅದೇ ಓವರ್‌ನ ಮುಂದಿನ ಎಸೆತದಲ್ಲಿ ರೂಟ್ ಅವರನ್ನು ಚಾಹಲ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
 ರೂಟ್ 42 ರನ್(37ಎ, 4ಬೌ,2ಸಿ) ಗಳಿಸಿ ಪೆವಿಲಿಯನ್ ಸೇರಿದ ಬಳಿಕ ಇಂಗ್ಲೆಂಡ್‌ನ ಬ್ಯಾಟಿಂಗ್ ಸೊರಗಿತು. ಚಾಹಲ್ ಮತ್ತು ಬುಮ್ರಾ ದಾಳಿಗೆ ಸಿಲುಕಿ ಬಳಿಕ 8 ರನ್ ಸೇರಿಸುವುಷ್ಟರಲ್ಲಿ ಉಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟಾಯಿತು. ಬಟ್ಲರ್(0), ಅಲಿ (2), ಸ್ಟೋಕ್ಸ್(6), ಜೋರ್ಡನ್(0), ಪ್ಲೆಂಕೆಟ್ (0), ಮಿಲ್ಸ್(0)ಔಟಾದರು. ಇದರೊಂದಿಗೆ ಇಂಗ್ಲೆಂಡ್ ಸೋಲೊಪ್ಪಿಕೊಂಡಿತು.
ಇದಕ್ಕೂ ಮೊದಲು ಭಾರ ತ 20 ಓವರ್‌ಗಳಲ್ಲ್ಲಿ6 ವಿಕೆಟ್ ನಷ್ಟದಲ್ಲಿ 202 ಗಳಿಸಿದೆ.
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಚೊಚ್ಚಲ ಅರ್ಧಶತಕ ಮತ್ತು ಸುರೇಶ್ ರೈನಾ ನಾಲ್ಕನೆ ಅರ್ಧಶತಕದ ನೆರವಿನಲ್ಲಿ ಭಾರತ ಗೆಲುವಿಗೆ ಇಂಗ್ಲೆಂಡ್‌ಗೆ ಕಠಿಣ ಸವಾಲು ವಿಧಿಸಿತ್ತು.
 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ (2) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತ್ತು. ನಾಯಕ ಕೊಹ್ಲಿ ಎರಡನೆ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ರನ್ ಕಡದಿಯಲು ಯತ್ನಿಸಿ ರನೌಟಾದರು. ಆಗ ತಂಡದ ಸ್ಕೋರ್ 4 ಆಗಿತ್ತು.
ಎರಡನೆ ವಿಕೆಟ್‌ಗೆ ರಾಹುಲ್ ಮತ್ತು ಸುರೇಶ್ ರೈನಾ 6.1 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿದರು. ರಾಹುಲ್ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 22 ರನ್ ಗಳಿಸಿ ಸ್ಟೋಕ್ಸ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ರಾಹುಲ್ ನಿರ್ಗಮನದ ಬಳಿಕ ಮಾಜಿ ನಾಯಕ ಧೋನಿ ಅವರು ರೈನಾಗೆ ಜೊತೆಯಾದರು. ಇವರ ಜೊತೆಯಾಟದಲ್ಲಿ ಮತ್ತೆ 6.1 ಓವರ್‌ಗಳಲ್ಲಿ 51 ರನ್ ಸೇರ್ಪಡೆಗೊಂಡಿತು. ರೈನಾ 39 ಎಸೆತಗಳಲ್ಲಿ 2ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ಅರ್ಧಶತಕ ಗಳಿಸಿದರು.
ತಂಡದ ಸ್ಕೋರ್ 13.3 ಓವರ್‌ಗಳಲ್ಲಿ 120ಕ್ಕೆ ತಲುಪುವಾಗ ರೈನಾ ಅವರು ಪ್ಲೆಂಕೆಟ್ ಎಸೆತದಲ್ಲಿ ಮೊರ್ಗನ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮುನ್ನ ರೈನಾ 63 ರನ್ (45ಎ, 2ಬೌ,5ಸಿ) ಗಳಿಸಿದರು.

ಯುವರಾಜ್ ಸಿಂಗ್ ಮತ್ತು ಧೋನಿ ಜೊತೆಯಾಗಿ 4.4 ಓವರ್‌ಗಳಲ್ಲಿ 57 ರನ್ ಸೇರಿಸಿದರು. ಯುವರಾಜ್ ಸಿಂಗ್ ಸ್ಫೋಟಕ 27 ರನ್(10ಎ, 1ಬೌ,3ಸಿ) ಗಳಿಸಿದರು. ಜೋರ್ಡನ್ ಅವರ 18ನೆ ಓವರ್‌ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿಗಳನ್ನು ಒಳಗೊಂಡ 23 ರನ್ ಕಬಳಿಸಿದರು. ಆ ಓವರ್‌ನಲ್ಲಿ ಧೋನಿ ಕೊಡುಗೆ 1 ರನ್. ಒಟ್ಟು 24 ರನ್‌ಗಳು ಆ ಓವರ್‌ನಲ್ಲಿ ಭಾರತದ ಖಾತೆಗೆ ಜಮೆಯಾಗಿತ್ತು, ಧೋನಿ 76ನೆ ಟ್ವೆಂಟಿ-20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ಅವರು 32 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ 1 ಸಿಕ್ಸರ್ ಇರುವ 11 ರನ್ ಗಳಿಸಿ ಕೊನೆಯ ಎಸೆತದಲ್ಲಿ ರನೌಟಾದರು. ಚೊಚ್ಚಲ ಪಂದ್ಯವನ್ನಾಡಿದ ಉತ್ತರಾಖಂಡ್‌ನ 19ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಶಬ್ ಪಂತ್ ಔಟಾಗದೆ 6 ರನ್ (3ಎ,1ಬೌ) ಗಳಿಸಿದರು.
ಇಂಗ್ಲೆಂಡ್ ತಂಡದ ಮಿಲ್ಸ್, ಜೋರ್ಡನ್, ಪ್ಲೆಂಕೆಟ್, ಸ್ಟೋಕ್ಸ್ ತಲಾ 1 ವಿಕೆಟ್ ಹಂಚಿಕೊಂಡರು.

ಸ್ಕೋರ್ ವಿವರ

ಭಾರತ 20 ಓವರ್‌ಗಳಲ್ಲಿ 202/6

ವಿರಾಟ್ ಕೊಹ್ಲಿ ರನೌಟ್ 02

ರಾಹುಲ್ ಬಿ ಸ್ಟೋಕ್ಸ್ 22

ರೈನಾ ಸಿ ಮೊರ್ಗನ್ ಬಿ ಪ್ಲಂಕೆಟ್ 63

ಧೋನಿ ಸಿ ರಶೀದ್ ಬಿ ಜೋರ್ಡನ್ 56

ಯುವರಾಜ್ ಸಿ ಬಟ್ಲರ್ ಬಿ ಮಿಲ್ಸ್ 27

ರಿಷಬ್ ಪಂತ್ ಅಜೇಯ 6

ಪಾಂಡ್ಯ ರನೌಟ್ 11

ಇತರ 15

ವಿಕೆಟ್‌ಪತನ: 1-4, 2-65, 3-120, 4-177, 5-191, 6-202.

ಬೌಲಿಂಗ್ ವಿವರ:

ಮಿಲ್ಸ್ 4-0-32-1

ಜೋರ್ಡನ್ 4-0-56-1

ಪ್ಲಂಕೆಟ್ 2-0-22-1

ಸ್ಟೋಕ್ಸ್ 4-0-32-1

ಅಲಿ 4-0-30-0

ರಶೀದ್ 2-0-23-0.

ಇಂಗ್ಲೆಂಡ್ 16.3 ಓವರ್‌ಗಳಲ್ಲಿ 127 ರನ್‌ಗೆ ಆಲೌಟ್

ಜೇಸನ್ ರಾಯ್ ಸಿ ಧೋನಿ ಬಿ ಮಿಶ್ರಾ 32

ಬಿಲ್ಲಿಂಗ್ಸ್ ಸಿ ರೈನಾ ಬಿ ಚಾಹಲ್ 00

ರೂಟ್ ಎಲ್ಬಿಡಬ್ಲು ಚಾಹಲ್ 42

ಮೊರ್ಗನ್ ಸಿ ಪಂತ್ ಬಿ ಚಾಹಲ್ 40

ಬಟ್ಲರ್ ಸಿ ಕೊಹ್ಲಿ ಬಿ ಬುಮ್ರಾ 00

ಸ್ಟೋಕ್ಸ್ ಸಿ ರೈನಾ ಬಿ ಚಾಹಲ್ 06

ಅಲಿ ಸಿ ಕೊಹ್ಲಿ ಬಿ ಚಾಹಲ್ 02

ಪ್ಲುಂಕೆಟ್ ಬಿ ಬುಮ್ರಾ 00

ಜೋರ್ಡನ್ ಸ್ಟಂ ಧೋನಿ ಬಿ ಚಾಹಲ್ 00

ರಶೀದ್ ಅಜೇಯ 00

 ಮಿಲ್ಸ್ ಸಿ ಕೊಹ್ಲಿ ಬಿ ಬುಮ್ರಾ 00

ಇತರ 05

ವಿಕೆಟ್ ಪತನ: 1-8, 2-55, 3-119, 4-119, 5-119, 6-123, 7-127, 8-127, 9-127, 10-127.

ಬೌಲಿಂಗ್ ವಿವರ

ನೆಹ್ರಾ 3-1-24-0

ಚಾಹಲ್ 4-0-25-6

ಬುಮ್ರಾ 2.3-0-14-3

ಮಿಶ್ರಾ 4-0-23-1

ಪಾಂಡ್ಯ 2-0-17-0

ರೈನಾ 1-0-22-0.

ಪಂದ್ಯಶ್ರೇಷ್ಠ: ವೈ.ಎಸ್. ಚಾಹಲ್

ಸರಣಿ ಶ್ರೇಷ್ಠ: ವೈ.ಎಸ್. ಚಾಹಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News