‘ಕೊಹ್ಲಿಯನ್ನು ಕೆಣಕಲು ಹೋಗಬೇಡಿ’
ಮೆಲ್ಬೋರ್ನ್, ಫೆ.3: ಭಾರತ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ‘‘ಆಸ್ಟ್ರೇಲಿಯದ ನಂ.1 ಎದುರಾಳಿ’’ ಎಂದು ಅಭಿಪ್ರಾಯಪಟ್ಟಿರುವ ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಹಸ್ಸಿ, ಭಾರತೀಯ ನಾಯಕನನ್ನು ಯಾವುದೇ ಕಾರಣಕ್ಕೆ ಕೆರಳಿಸಲು ಹೋಗಬೇಡಿ ಎಂದು ಸ್ಮಿತ್ ಬಳಗಕ್ಕೆ ಸಲಹೆ ನೀಡಿದ್ದಾರೆ.
‘‘ಆಸ್ಟ್ರೇಲಿಯದ ದೃಷ್ಟ್ಟಿಕೋನದಲ್ಲಿ ವಿರಾಟ್ ನಂ.1 ಎದುರಾಳಿಯಾಗಿದ್ದು, ಅವರನ್ನು ಬೇಗನೆ ಔಟ್ ಮಾಡಬೇಕಾಗಿದೆ. ಕೊಹ್ಲಿ ನಿಜವಾದ ಹೋರಾಟಗಾರ. ಅವರು ಹೋರಾಟಕಾರಿ ಪ್ರದರ್ಶನ ನೀಡಲು ತುಂಬಾ ಇಷ್ಟಪಡುತ್ತಾರೆ’’ ಎಂದು ಕ್ರಿಕೆಟ್ ಡಾಟ್‌ಕಾಮ್‌ಗೆ ಹಸ್ಸಿ ತಿಳಿಸಿದ್ದಾರೆ.
‘‘ನಾವು ಸ್ಪಷ್ಟವಾದ ಯೋಜನೆ ಹಾಕಿಕೊಳ್ಳಬೇಕಾಗಿದೆ. ಆದಷ್ಟು ಬೇಗನೆ ಯೋಜನೆ ರೂಪಿಸಲು ಯತ್ನಿಸಬೇಕು. ಎದುರಾಳಿ ಆಟಗಾರನನ್ನು ಕೆರಳಿಸುವ ಗೋಜಿಗೆ ಹೋಗಬಾರದು. ಕೆರಳಿಸಲು ಹೋದರೆ ಅದರಿಂದ ಕೆಡುಕುಗಳೆ ಜಾಸ್ತಿ’’ ಎಂದು 79 ಟೆಸ್ಟ್‌ಗಳಲ್ಲಿ 6,235 ರನ್ ಗಳಿಸಿ 2013ರಲ್ಲಿ ನಿವೃತ್ತಿಯಾಗಿದ್ದ ಹಸ್ಸಿ ನುಡಿದರು.
ಕೊಹ್ಲಿ ಕಳೆದ ಕೆಲವು ಸಮಯದಿಂದ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದು, 2014ರಲ್ಲಿ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೊಹ್ಲಿ ಅವರನ್ನು ಕೆಣಕಿದ್ದ ಆಸ್ಟ್ರೇಲಿಯ ತಂಡ ತಕ್ಕ ಬೆಲೆ ತೆತ್ತಿತ್ತು. ಆ ಪಂದ್ಯದಲ್ಲಿ ಜೀವನಶ್ರೇಷ್ಠ 169 ರನ್ ಗಳಿಸಿದ್ದ ಕೊಹ್ಲಿ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳಲು ಕಾರಣರಾಗಿದ್ದರು.
‘‘ಪ್ರಸ್ತುತ ಸನ್ನಿವೇಶದಲ್ಲಿ ಕೊಹ್ಲಿ ಭಾರೀ ಆತ್ಮವಿಶ್ವಾಸದಲ್ಲಿದ್ದಾರೆ. ಅವರಿಗೆ ಪಂದ್ಯದ ವಾತಾವರಣದ ಬಗ್ಗೆ ಚೆನ್ನಾಗಿ ಗೊತ್ತಿದೆ. ಕೊಹ್ಲಿ ಚೆನ್ನಾಗಿ ಆಡಿದರೆ ಭಾರತ ಗೆಲ್ಲುವುದು ಖಚಿತ’’ ಎಂದು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ್ನು ಪ್ರತಿನಿಧಿಸಿದ್ದ 41ರ ಪ್ರಾಯದ ಹಸ್ಸಿ ಹೇಳಿದ್ದಾರೆ.