ಐಪಿಎಲ್‌ನಿಂದ ಕೆವಿನ್ ಪೀಟರ್ಸನ್ ಔಟ್
ಲಂಡನ್, ಫೆ.3: ಇಂಗ್ಲೆಂಡ್‌ನ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಮುಂಬರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು 10ನೆ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ.
ಮುಂಬರುವ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ನಾನು ಈ ಬಾರಿ ಐಪಿಎಲ್‌ನಲ್ಲಿ ಭಾಗವಹಿಸದೇ ಇರುವ ತೀರ್ಮಾನಕ್ಕೆ ಬಂದಿದ್ದಾಗಿ ಪೀಟರ್ಸನ್ ಟ್ವೀಟ್ ಮಾಡಿದ್ದಾರೆ. ಪೀಟರ್ಸನ್ ತೀರಾ ಇತ್ತೀಚೆಗೆ ಆಸ್ಟ್ರೇಲಿಯದ ಬಿಗ್‌ಬಾಶ್ ಟ್ವೆಂಟಿ-20 ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಿದ್ದರು. ದಕ್ಷಿಣ ಆಫ್ರಿಕ ಕ್ರಿಕೆಟ್ ಲೀಗ್‌ನಲ್ಲಿ ಹಾಲಿವುಡ್‌ಬೆಟ್ಸ್ ಡಾಲ್ಫಿನ್ಸ್ ತಂಡವನ್ನು ಪ್ರತಿನಿಧಿಸಿದ್ದರು.
'ಕೆಪಿ' ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ಪೀಟರ್ಸನ್ 2012ರಲ್ಲಿ ಐಪಿಎಲ್‌ನಲ್ಲಿ ಆಡಲು ಆರಂಭಿಸಿದ್ದರು. ಆರಂಭದಲ್ಲಿ ದಿಲ್ಲಿ ಡೇರ್ ಡೆವಿಲ್ಸ್‌ನ್ನು ಪ್ರತಿನಿಧಿಸಿದ್ದ ಪೀಟರ್ಸನ್ ತನ್ನ ಮೊದಲ ಪಂದ್ಯದಲ್ಲಿ ಚೊಚ್ಚಲ ಟ್ವೆಂಟಿ-20 ಶತಕ ಬಾರಿಸಿದ್ದರು. ಪೀಟರ್ಸನ್ ಒಟ್ಟು 40 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಒಟ್ಟು 1,074 ರನ್ ಗಳಿಸಿದ್ದಾರೆ. 1 ಶತಕ, 3 ಅರ್ಧಶತಕ ಗಳಿಸಿರುವ ಅವರು 3 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
2009-10ರಲ್ಲಿ 1.5 ಮಿಲಿಯನ್ ಡಾಲರ್‌ಗೆ ವಿಜಯ್ ಮಲ್ಯ ಮಾಲಿಕತ್ವದ ಆರ್‌ಸಿಬಿಗೆ ಹರಾಜಾಗಿದ್ದ ಪೀಟರ್ಸನ್ 2016ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಕೇವಲ 4 ಪಂದ್ಯಗಳನ್ನು ಆಡಿದ್ದ ಅವರು 73 ರನ್ ಗಳಿಸಿದ್ದರು.