ಭಾರತಕ್ಕೆ ಹೋಗಬೇಡಿ: ಆಸ್ಟ್ರೇಲಿಯಕ್ಕೆ ಪೀಟರ್ಸನ್ ಎಚ್ಚರಿಕೆ
ಲಂಡನ್, ಫೆ.3: ‘‘ಸ್ಪಿನ್ನರ್‌ಗಳ ವಿರುದ್ಧ ಹೇಗೆ ಆಡಬೇಕೆಂಬ ಬಗ್ಗೆ ಬೇಗನೆ ಕಲಿತುಕೊಳ್ಳಿ. ನಿಮಗೆ ಸ್ಪಿನ್ನರ್‌ಗಳ ವಿರುದ್ಧ ಆಡಲು ಸಾಧ್ಯವಾಗದಿದ್ದರೆ ಭಾರತಕ್ಕೆ ಪ್ರವಾಸಕೈಗೊಳ್ಳಬೇಡಿ’’ ಹೀಗೆಂದು ಆಸ್ಟ್ರೇಲಿಯಕ್ಕೆ ಎಚ್ಚರಿಕೆ ಕೊಟ್ಟವರು ಬೇರ್ಯಾರು ಅಲ್ಲ, ಇಂಗ್ಲೆಂಡ್‌ನ ಒಂದು ಕಾಲದ ಸ್ಟಾರ್ ಬ್ಯಾಟ್ಸ್‌ಮನ್ ಕೇವಿನ್ ಪೀಟರ್ಸನ್.
2012ರಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸಕೈಗೊಂಡಿದ್ದಾಗ ಒಟ್ಟು 338 ರನ್ ಗಳಿಸಿದ್ದ ಪೀಟರ್ಸನ್ ಆಂಗ್ಲರು ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು.
‘‘ನೀವು ಅಲ್ಲಿಗೆ(ಭಾರತ) ಹೋದರೆ ಅಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ. ನೀವು ನಿಜವಾಗಿಯೂ ಕಠಿಣ ಅಭ್ಯಾಸ ಮಾಡಿದರೆ ಪ್ರತಿಫಲ ಸಿಗುತ್ತದೆ. ಅಭ್ಯಾಸ ಮಾಡಲು ಸ್ಪಿನ್ ಸ್ನೇಹಿ ಪಿಚ್ ಇರಬೇಕೆಂದು ಅಗತ್ಯವಿಲ್ಲ. ಯಾವುದೇ ರೀತಿಯ ಪಿಚ್‌ನಲ್ಲೂ ಅಭ್ಯಾಸ ಮಾಡಬಹುದು’’ ಎಂದು ಪೀಟರ್ಸನ್ ನುಡಿದರು.
ಆಸ್ಟ್ರೇಲಿಯ 2004ರ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿಲ್ಲ. 2011ರಲ್ಲಿ ಏಷ್ಯಾ ಖಂಡದಲ್ಲಿ ಶ್ರೀಲಂಕಾದ ವಿರುದ್ಧ ಕೊನೆಯ ಬಾರಿ ಸರಣಿ ಗೆದ್ದುಕೊಂಡಿತ್ತು. ಉಪಖಂಡದಲ್ಲಿ ಸತತ 9 ಪಂದ್ಯಗಳನ್ನು ಸೋತಿರುವ ಆಸೀಸ್‌ಗೆ ಇಂಗ್ಲೆಂಡ್ ವಿರುದ್ಧ 4-0 ಅಂತರದಿಂದ ಸರಣಿ ಗೆದ್ದುಕೊಂಡಿರುವ ಭಾರತ ಕಠಿಣ ಸವಾಲು ಒಡ್ಡಲಿದೆ.