×
Ad

ಡೇವಿಸ್‌ಕಪ್: ಭಾರತ ಶುಭಾರಂಭ

Update: 2017-02-03 23:18 IST

ಪುಣೆ, ಫೆ.3: ನ್ಯೂಝಿಲೆಂಡ್ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ಏಷ್ಯಾ/ಒಶಿಯಾನಿಯ ಗ್ರೂಪ್-1ನೆ ಸುತ್ತಿನ ಪಂದ್ಯದಲ್ಲಿ ಭಾರತ 2-0 ಮುನ್ನಡೆ ಸಾಧಿಸಿ ಶುಭಾರಂಭ ಮಾಡಿದೆ.

ಇಲ್ಲಿನ ಬಾಲೆವಾಡಿಯಲ್ಲಿ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಯುವ ಟೆನಿಸ್ ತಾರೆ ಯೂಕಿ ಭಾಂಬ್ರಿ ಹಾಗೂ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ರಾಮ್‌ಕುಮಾರ್ ರಾಮ್‌ನಾಥನ್ ನೇರ ಸೆಟ್‌ಗಳಿಂದ ಜಯ ಸಾಧಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು.

ಎರಡು ಗಂಟೆ, 10 ನಿಮಿಷಗಳ ಕಾಲ ನಡೆದ ಮೊದಲ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ದಿಲ್ಲಿಯ 24ರ ಹರೆಯದ ಭಾಂಬ್ರಿ ಎದುರಾಳಿ ನ್ಯೂಝಿಲೆಂಡ್ ತಂಡದ ಫಿನ್ ಟೆರ್ನಿ ವಿರುದ್ಧ 6-4, 6-4, 6-3 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.

ದಿನದ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸಿಂಗಲ್ಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಅವರು ಜೋಸ್ ಸ್ಟಾಥಮ್‌ರನ್ನು 6-3, 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಚೆನ್ನೈ ಆಟಗಾರ ರಾಮ್‌ಕುಮಾರ್ ಸೂಪರ್ಬ್ ರಿಟರ್ನ್ ಹಾಗೂ ಮುಂಗೈ ಹೊಡೆತದಿಂದ ಗಮನ ಸೆಳೆದರು.

 1-3 ಹಿನ್ನಡೆಯಿಂದ ಚೇತರಿಸಿಕೊಂಡ ಭಾಂಬ್ರಿ 47ನೆ ನಿಮಿಷದಲ್ಲಿ ಮೊದಲ ಸೆಟ್‌ನ್ನು ವಶಪಡಿಸಿಕೊಂಡರು. ಎರಡನೆ ಸೆಟ್‌ನಲ್ಲೂ ಆರಂಭದಲ್ಲಿ 0-2ರಿಂದ ಹಿನ್ನಡೆಯಲ್ಲಿದ್ದ ಭಾಂಬ್ರಿ ಬಳಿಕ ಚೇತರಿಕೆಯ ಪ್ರದರ್ಶನ ನೀಡಿದರು. ಮೂರನೆ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ಭಾಂಬ್ರಿ 6-3 ಸೆಟ್‌ಗಳಿಂದ ಗೆಲುವು ಸಾಧಿಸಿದರು.

368ನೆ ರ್ಯಾಂಕಿನ ಭಾಂಬ್ರಿ ಡೇವಿಸ್ ಕಪ್‌ನ ಸಿಂಗಲ್ಸ್ ವಿಭಾಗದಲ್ಲಿ 10-5 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ.

ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ರಾಮ್‌ಕುಮಾರ್ ಮೊದಲ ಸೆಟ್‌ನ್ನು ಅರ್ಧಗಂಟೆಯಲ್ಲಿ ವಶಪಡಿಸಿಕೊಂಡರು.ಎರಡನೆ ಸೆಟ್‌ನಲ್ಲಿ ಇಬ್ಬರು ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಅಂತಿಮವಾಗಿ ರಾಮ್ 6-4 ಅಂತರದಿಂದ ಜಯ ಸಾಧಿಸಿದರು. ಟೂರ್ನಮೆಂಟ್‌ನಲ್ಲಿ 22-14 ಗೆಲುವು-ಸೋಲು ದಾಖಲೆ ಹೊಂದಿರುವ ಸ್ಟಾಥಮ್‌ಗೆ 3ನೆ ಸೆಟ್‌ನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಪೇಸ್ ವಿಶ್ವದಾಖಲೆ ನಿರೀಕ್ಷೆ:

ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಪಂದ್ಯದ ಎರಡನೆ ದಿನವಾದ ಶನಿವಾರ ಡಬಲ್ಸ್ ಪಂದ್ಯವನ್ನು ಆಡಲಿದ್ದು, 43ನೆ ಗೆಲುವಿನೊಂದಿಗೆ ಡೇವಿಸ್ ಕಪ್ ಇತಿಹಾಸದಲ್ಲಿ ಗರಿಷ್ಠ ಪಂದ್ಯಗಳನ್ನು ಜಯಿಸಿ ವಿಶ್ವದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ. 43ರ ಪ್ರಾಯದ ಪೇಸ್ 55ನೆ ಡೇವಿಸ್ ಕಪ್ ಪಂದ್ಯವನ್ನು ಆಡಲಿದ್ದು, ಶನಿವಾರ ನಡೆಯಲಿರುವ ತನ್ನ 43ನೆ ಡಬಲ್ಸ್ ಪಂದ್ಯದಲ್ಲಿ ನ್ಯಾಶನಲ್ ಚಾಂಪಿಯನ್ ವಿಷ್ಣುವರ್ಧನ್ ಜೊತೆಗೂಡಿ ನ್ಯೂಝಿಲೆಂಡ್‌ನ ಅರ್ಟೆಮ್ ಸಿಟಾಕ್ ಹಾಗೂ ಮೈಕಲ್ ವೀನಸ್‌ರನ್ನು ಎದುರಿಸಲಿದ್ದಾರೆ.

ಪೇಸ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಡೇವಿಸ್‌ಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎನಿಸಿಕೊಂಡು ಹೊಸ ದಾಖಲೆ ನಿರ್ಮಿಸಲಿದ್ದಾರೆ. ಕಿವೀಸ್‌ನ ಮೈಕಲ್ ವೀನಸ್ ಹಾಗೂ ಅರ್ಟೆಮ್ ಸಿಟಾಕ್ ಅನುಭವಿ ಡಬಲ್ಸ್ ಆಟಗಾರರಾಗಿರುವ ಕಾರಣ ಭಾರತೀಯ ಜೋಡಿಗೆ ಸವಾಲಾಗುವ ಸಾಧ್ಯತೆಯಿದೆ.

ಸಾಕೇತ್ ಮೈನೇನಿ ಕಳೆದ ತಿಂಗಳು ನಡೆದ ಚೆನ್ನೈ ಓಪನ್‌ನಲ್ಲಿ ಕಾಲ್ಬೆರಳ ನೋವಿಗೆ ತುತ್ತಾದ ಕಾರಣ ಕೊನೆಯ ಕ್ಷಣದಲ್ಲಿ ಪೇಸ್‌ರೊಂದಿಗೆ ಡಬಲ್ಸ್ ಪಂದ್ಯ ಆಡುವುದರಿಂದ ವಂಚಿತರಾಗಿದ್ದರು. ಮೈನೇನಿ ಬದಲಿಗೆ ವಿಷ್ಣುವರ್ಧನ್‌ಗೆ ಅವಕಾಶ ಲಭಿಸಿತ್ತು. ವಿಷ್ಣು ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಪೇಸ್‌ರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದರು. ಆದರೆ, ಆ ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News