ಗೋವಾ ವಿರುದ್ಧ ಕರ್ನಾಟಕಕ್ಕೆ ಗೆಲುವು
ಚೆನ್ನೈ, ಫೆ.3: ವೇಗದ ಬೌಲರ್ ಶ್ರೀನಾಥ್ ಅರವಿಂದ್ ಕಬಳಿಸಿದ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಕರ್ನಾಟಕ ತಂಡ ಗೋವಾ ವಿರುದ್ಧ 6 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿದೆ.
ಗೆಲುವಿಗೆ 121 ರನ್ ಬೆನ್ನತ್ತಿದ ಕರ್ನಾಟಕ ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಪವನ್ ದೇಶಪಾಂಡೆ ಬಾರಿಸಿದ ಅಜೇಯ 32 ರನ್ ನೆರವಿನಿಂದ 12ನೆ ಓವರ್‌ನಲ್ಲಿ ಗೆಲುವಿನ ದಡ ಸೇರಿತು. ಭಡ್ತಿ ಪಡೆದು ಅಗರವಾಲ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ನಾಯಕ ವಿನಯಕುಮಾರ್ ಸರ್ವಾಧಿಕ ರನ್(34) ಬಾರಿಸಿದರು. ಕುಮಾರ್ ಇನಿಂಗ್ಸ್‌ನಲ್ಲಿ 3 ಬೌಂಡರಿ, 1 ಸಿಕ್ಸರ್‌ಯಿದ್ದವು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಗೋವಾ ತಂಡ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು ಒಂದು ಹಂತದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 80 ರನ್ ಗಳಿಸಿತ್ತು. ಆದರೆ 4 ಎಸೆತಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು 7 ವಿಕೆಟ್‌ಗೆ 120 ರನ್ ಗಳಿಸಲಷ್ಟೇ ಶಕ್ತವಾಯಿತು. ಕರ್ನಾಟಕದ ಪರ ಅರವಿಂದ್‌ರಲ್ಲದೆ ಸುಚಿತ್, ದೇಶಪಾಂಡೆ ಹಾಗೂ ಕೆ.ಗೌತಮ್ ತಲಾ ಒಂದು ವಿಕೆಟ್ ಪಡೆದರು.
ಕೇರಳವನ್ನು ಕೆಡವಿದ ತಮಿಳುನಾಡು: ಮತ್ತೊಂದು ಪಂದ್ಯದಲ್ಲಿ ಆತಿಥೇಯ ತಮಿಳುನಾಡು ತಂಡ ಬಾಬಾ ಅಪರಾಜಿತ್ ದಾಖಲಿಸಿದ ಅಜೇಯ 51 ರನ್ ನೆರವಿನಿಂದ ಕೇರಳ ನೀಡಿದ 128 ರನ್ ಗುರಿಯನ್ನು 6 ವಿಕೆಟ್ ನಷ್ಟದಲ್ಲಿ ತಲುಪಿತು. ಈ ಮೂಲಕ ಕಳೆದ 5 ಪಂದ್ಯಗಳಲ್ಲಿ ನಾಲ್ಕನೆ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಕೇರಳ ತಂಡ ಸಚಿನ್ ಬೇಬಿ(ಅಜೇಯ 53) ಹಾಗೂ ಜಲಜ್ ಸಕ್ಸೇನಾ 5ನೆ ವಿಕೆಟ್‌ಗೆ ಸೇರಿಸಿದ 51 ರನ್ ನೆರವಿನಿಂದ ಸಾಧಾರಣ ಮೊತ್ತ ದಾಖಲಿಸಿತು. ಅಶ್ವಿನ್ ಕ್ರಿಸ್ಟ್(3-22) ಯಶಸ್ವಿ ಬೌಲರ್ ಎನಿಸಿಕೊಂಡರು.
ಸ್ವರೂಪ್‌ಗೆ 5 ವಿಕೆಟ್; ಆಂಧ್ರಕ್ಕೆ ಗೆಲುವು: ಲೆಗ್-ಸ್ಪಿನ್ನರ್ ಡಿ.ಸ್ವರೂಪ್ ಕುಮಾರ್ ಉಡಾಯಿಸಿದ 5 ವಿಕೆಟ್ ಗೊಂಚಲಿನ ಸಹಾಯದಿಂದ ಹೈದರಾಬಾದ್ ವಿರುದ್ಧ ಆಂಧ್ರ ತಂಡ 11 ರನ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಂಧ್ರ ತಂಡ ನಾಯಕ ಹನುಮಾನ್ ವಿಹಾರಿ(49) ನೆರವಿನಿಂದ 140 ರನ್ ಗಳಿಸಿತು. ಮುಹಮ್ಮದ್ ಸಿರಾಜ್ ದಾಳಿಗೆ ಸಿಲುಕಿದ ಆಂಧ್ರ ಕೊನೆಯ 8 ವಿಕೆಟ್‌ಗಳನ್ನು 37 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು.
ಗೆಲ್ಲಲು 141 ರನ್ ಗುರಿ ಪಡೆದಿದ್ದ ಹೈದರಾಬಾದ್ 2 ವಿಕೆಟ್‌ಗೆ 85 ರನ್ ಗಳಿಸಿತ್ತು. ಆದರೆ, 99 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 129 ರನ್‌ಗೆ ಆಲೌಟಾಯಿತು. ಕೆಳ ಕ್ರಮಾಂಕದ ದಾಂಡಿಗರನ್ನು ಕಾಡಿದ ಗಿರಿನಾಥ್ ರೆಡ್ಡಿ(3-19) 3 ವಿಕೆಟ್ ಪಡೆದರು.