×
Ad

ಶುಭ್ಮನ್ ಗಿಲ್ ಅಜೇಯ ಶತಕ, ಭಾರತಕ್ಕೆ ಜಯ

Update: 2017-02-03 23:23 IST

 ಹೊಸದಿಲ್ಲಿ, ಫೆ.3: ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಭಾರತದ ಅಂಡರ್-19 ತಂಡ 3ನೆ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವನ್ನು 215 ರನ್‌ಗೆ ನಿಯಂತ್ರಿಸಿದ್ದ ಭಾರತದ ಅಂಡರ್-19 ತಂಡ ಕೇವಲ 3 ವಿಕೆಟ್ ನಷ್ಟದಲ್ಲಿ 45ನೆ ಓವರ್‌ನಲ್ಲಿ 216 ರನ್ ಗಳಿಸಿ ಗೆಲುವಿನ ದಡ ಸೇರಿತು.

ಅಜೇಯ 138 ರನ್ ಗಳಿಸಿದ ಗಿಲ್ 157 ಎಸೆತಗಳಲ್ಲಿ 17 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ವಿಕೆಟ್‌ಕೀಪರ್ ಹಾರ್ವಿಕ್ ದೇಸಾಯಿ(ಅಜೇಯ 37, 50 ಎಸೆತ) ಅವರೊಂದಿಗೆ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 115 ರನ್ ಸೇರಿಸಿದ ಗಿಲ್ ಭಾರತಕ್ಕೆ ಸುಲಭ ಗೆಲುವು ತಂದರು.

6ನೆ ಓವರ್‌ಗೆ 50 ರನ್ ಕಲೆ ಹಾಕಿದ ಆರಂಭಿಕ ಆಟಗಾರರಾದ ಗಿಲ್ ಹಾಗೂ ಹಿಮಾಂಶು ರಾಣಾ(19)ಮೊದಲ ವಿಕೆಟ್‌ಗೆ 63 ರನ್ ಸೇರಿಸಿ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ವೇಗಿ ಆ್ಯರೊನ್ ಬಿಯರ್ಡ್ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ 3 ಬೌಂಡರಿ ಚಚ್ಚಿದ ಗಿಲ್ ತನ್ನ ಉದ್ದೇಶ ಸ್ಪಷ್ಟಪಡಿಸಿದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 38 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಭಾರತೀಯ ಸ್ಪಿನ್ನರ್‌ಗಳು 7 ವಿಕೆಟ್‌ಗಳನ್ನು ಹಂಚಿಕೊಂಡಿದ್ದು, ಲೆಗ್ ಸ್ಪಿನ್ನರ್ ರಾಹುಲ್ ಚಾಹರ್(4-33) ಹಾಗೂ ಎಡಗೈ ಸ್ಪಿನ್ನರ್ ಅನುಕೂಲ್ ರಾಯ್(3-39) ಇಂಗ್ಲೆಂಡ್ ಬ್ಯಾಟಿಂಗ್ ಸರದಿಯನ್ನು ಭೇದಿಸಿದರು.

ಫಾರ್ಮ್‌ನಲ್ಲಿರುವ ರಾವ್‌ಲಿನ್ಸ್(96 ರನ್, 106 ಎಸೆತ, 11 ಬೌಂಡರಿ, 2 ಸಿಕ್ಸರ್) ಉತ್ತಮ ಪ್ರದರ್ಶನ ಮುಂದುವರಿಸಿದರೆ, ಜಾರ್ಜ್ ಬಾರ್ಟ್‌ಲೆಟ್(55, 6 ಬೌಂಡರಿ, 1 ಸಿಕ್ಸರ್) ಎರಡಂಕೆ ಸ್ಕೋರ್ ದಾಖಲಿಸಿದರು. ರಾವ್‌ಲಿನ್ಸ್-ಬಾರ್ಟ್‌ಲೆಟ್ 3ನೆ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿದರು. ರಾವ್‌ಲಿನ್ಸ್ ನಿರ್ಗಮಿಸಿದ ಬಳಿಕ ಇಂಗ್ಲೆಂಡ್‌ನ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು.

ಒಂದು ಹಂತದಲ್ಲಿ 6 ವಿಕೆಟ್‌ಗೆ 198 ರನ್ ಗಳಿಸಿದ್ದ ಇಂಗ್ಲೆಂಡ್ 215 ರನ್‌ಗೆ ಆಲೌಟಾಯಿತು. ಉಭಯ ತಂಡಗಳು ಫೆ.6 ರಂದು 4ನೆ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News