ಡೇವಿಸ್‌ಕಪ್: ಕಿವೀಸ್ ವಿರುದ್ಧ ಭಾರತಕ್ಕೆ ಸೋಲು
ಪುಣೆ, ಫೆ.4: ಡೇವಿಸ್ ಕಪ್‌ನ ಏಷ್ಯಾ-ಒಶಿಯಾನಿಯ ಗ್ರೂಪ್-1ರ ಎರಡನೆ ದಿನದಾಟವಾದ ಶನಿವಾರ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ವಿಶ್ವ ದಾಖಲೆ ನಿರ್ಮಿಸುವ ಅವಕಾಶದಿಂದ ವಂಚಿತರಾದರು.
ಇಲ್ಲಿನ ಶಿವಛತ್ರಪತಿ ಸ್ಪೋರ್ಟ್ಸ್ ಸಂಕೀರ್ಣದಲ್ಲಿ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಡಬಲ್ಸ್ ಪಂದ್ಯದಲ್ಲಿ ನ್ಯೂಝಿಲೆಂಡ್‌ನ ಅರ್ಟೆಮ್ ಸಿಟಾಕ್ ಹಾಗೂ ಮೈಕಲ್ ವೀನಸ್ ಅವರು ಯುವ ಆಟಗಾರ ವಿಷ್ಣುವರ್ಧನ್‌ರೊಂದಿಗೆ ಕಣಕ್ಕಿಳಿದ ಪೇಸ್ ವಿರುದ್ಧ 3-6, 6-3, 7-6(6), 6-3 ಸೆಟ್‌ಗಳ ಅಂತರದಿಂದ ಜಯಭೇರಿ ಬಾರಿಸಿದರು. ಕಿವೀಸ್ ನಿರ್ಣಾಯಕ ನಾಲ್ಕನೆ ಪಂದ್ಯವನ್ನು 6-3 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಮೇಲುಗೈ ಸಾಧಿಸಿತು.
ಮೊದಲ ದಿನವಾದ ಶುಕ್ರವಾರ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಸೋತಿದ್ದ ನ್ಯೂಝಿಲೆಂಡ್ ಇಂದು ಡಬಲ್ಸ್ ಪಂದ್ಯವನ್ನು ಜಯಿಸಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿದೆ.
ಮೊದಲ ದಿನವಾದ ಶುಕ್ರವಾರ ಯೂಕಿ ಭಾಂಬ್ರಿ ಹಾಗೂ ರಾಮಕುಮಾರ್ ರಾಮನಾಥನ್ ಸಿಂಗಲ್ಸ್ ಪಂದ್ಯಗಳನ್ನು ಜಯಿಸುವ ಮೂಲಕ ಭಾರತಕ್ಕೆ 2-0ಮುನ್ನಡೆಯನ್ನು ಒದಗಿಸಿಕೊಟ್ಟಿದ್ದರು.
55ನೆ ಬಾರಿ ಡೇವಿಸ್‌ಕಪ್ ಆಡಿದ ಪೇಸ್ ದಾಖಲೆ 43ನೆ ಡಬಲ್ಸ್ ಪಂದ್ಯವನ್ನು ಜಯಿಸಿ ಡೇವಿಸ್‌ಕಪ್ ಇತಿಹಾಸದಲ್ಲಿ ಗರಿಷ್ಠ ಪಂದ್ಯಗಳನ್ನು ಜಯಿಸಿದ ಸಾಧನೆಮಾಡುವ ವಿಶ್ವಾಸದಲ್ಲಿದ್ದರು. ಆದರೆ, ನ್ಯೂಝಿಲೆಂಡ್‌ನ ಹಿರಿಯ ಡಬಲ್ಸ್ ಆಟಗಾರರಾದ ಸಿಟಾಕ್-ವೀನಸ್ ಜೋಡಿ ಇದಕ್ಕೆ ಅವಕಾಶ ನೀಡಲಿಲ್ಲ.
ರವಿವಾರ ನಡೆಯಲಿರುವ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಭಾರತ ಆಡಲಿದೆ. ರಿವರ್ಸ್ ಪಂದ್ಯದಲ್ಲಿ ರಾಮ್‌ಕುಮಾರ್ ನ್ಯೂಝಿಲೆಂಡ್‌ನ ನಂ.1 ಆಟಗಾರ ಫಿನ್ ಟಿಯರ್ನಿ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯವನ್ನು ಗೆದ್ದುಕೊಂಡು ಭಾರತಕ್ಕೆ 3-1 ಅಂತರದ ಗೆಲುವು ತರುವ ವಿಶ್ವಾಸ ಮೂಡಿಸಿದ್ದಾರೆ.
ಡೇವಿಸ್‌ಕಪ್: ಜೊಕೊವಿಕ್‌ಗೆ ಜಯ, ಚಾಂಪಿಯನ್ ಅರ್ಜೆಂಟೀನಕ್ಕೆ ಶಾಕ್
ಪ್ಯಾರಿಸ್, ಫೆ.4: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ 12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಪಂದ್ಯದಲ್ಲಿ ಸರ್ಬಿಯಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು.
ಶುಕ್ರವಾರ ಇಲ್ಲಿ ನಡೆದ ರಶ್ಯ ವಿರುದ್ಧದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಜೊಕೊವಿಕ್‌ಗೆ ಭುಜನೋವು ಕಾಣಿಸಿಕೊಂಡಿದ್ದರೂ, ಚಿಕಿತ್ಸೆಯ ಪಡೆದು ಪಂದ್ಯವನ್ನು ಮುಂದುವರಿಸಿ ಎದುರಾಳಿ ಡಾನಿಲ್ ಮೆಡ್ವೆಡೆವ್‌ರನ್ನು 3-6, 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದರು. ಆಸ್ಟ್ರೇಲಿಯನ್ ಓಪನ್‌ನ ಎರಡನೆ ಸುತ್ತಿನಲ್ಲಿ ಸೋತು ಆಘಾತಕ್ಕೀಡಾಗಿದ್ದ ಜೊಕೊವಿಕ್ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಎದುರು ನೋಡುತ್ತಿದ್ದಾರೆ.
ಇದಕ್ಕೆ ಮೊದಲು ನಡೆದ ಮತ್ತೊಂದು ಪಂದ್ಯದಲ್ಲಿ ವಿಶ್ವದ ನಂ.37ನೆ ಆಟಗಾರ ವಿಕ್ಟರ್ ಟ್ರಾಸ್ಕಿ ಅವರು ಕರೆನ್ ಖಾಚಾನೊವ್‌ರನ್ನು 6-4, 6-7(3/7),6-3, 1-6, 7-6(8/6) ಸೆಟ್‌ಗಳ ಅಂತರದಿಂದ ಸೋಲಿಸಿ 2010ರ ಚಾಂಪಿಯನ್ ಸರ್ಬಿಯಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
ಚಾಂಪಿಯನ್ ಅರ್ಜೆಂಟೀನಕ್ಕೆ ಸೋಲು: ಚಾಂಪಿಯನ್ ಅರ್ಜೆಂಟೀನ ತಂಡ ಫುಟ್ಬಾಲ್ ಲೆಜಂಡ್ ಡಿಯಾಗೊ ಮರಡೋನಾ ಅವರ ಬೆಂಬಲದ ಹೊರತಾಗಿಯೂ ಇಟಲಿ ವಿರುದ್ಧ 2-0 ಅಂತರದಿಂದ ಸೋಲುಂಡಿತು.
2016ರ ಫೈನಲ್‌ನಲ್ಲಿ ಕ್ರೊಯೇಷಿಯ ವಿರುದ್ಧ ಗೆಲುವು ತಂದಿದ್ದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಹಾಗೂ ಫೆಡರಿಕೊ ಡೆಲ್ಬೊನಿಸ್ ಅನುಪಸ್ಥಿತಿಯಲ್ಲಿ ಆಡಿದ ಅರ್ಜೆಂಟೀನ ತಂಡ ಮರಡೋನಾ ಸಹಿತ 2000ರಷ್ಟು ಸೇರಿದ್ದ ಟೆನಿಸ್ ಅಭಿಮಾನಿಗಳಿಗೆ ನಿರಾಸೆಗೊಳಿಡಿತು.
ಅರ್ಜೆಂಟೀನದ ಗುಡೊ ಪೆಲ್ಲಾ ಅವರು ಪಾಲೊ ಲೊರೆಂಝಿ ವಿರುದ್ಧ 6-3, 6-3, 6-3 ಸೆಟ್‌ಗಳ ಅಂತರದಿಂದ ಸೋತರು. ಕಾರ್ಲಸ್ ಬೆರ್ಲಾಕ್‌ರನ್ನು 6-1, 6-2, 1-6, 7-6(8/6) ಸೆಟ್‌ಗಳ ಅಂತರದಿಂದ ಮಣಿಸಿದ ಆ್ಯಂಡ್ರಿಯಸ್ ಸೆಪ್ಪಿ ಇಟಲಿಗೆ 2-0 ಮುನ್ನಡೆ ಒದಗಿಸಿಕೊಟ್ಟರು