ಇಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆರಂಭ
ಹೈದರಾಬಾದ್, ಫೆ.4: ಭಾರತ ‘ಎ’ ಹಾಗೂ ಬಾಂಗ್ಲಾದೇಶದ ನಡುವೆ ದ್ವಿದಿನ ಅಭ್ಯಾಸ ಪಂದ್ಯ ರವಿವಾರ ಇಲ್ಲಿ ಆರಂಭವಾಗಲಿದ್ದು, ಹಾರ್ದಿಕ್ ಪಾಂಡ್ಯ ಹಾಗೂ ಫಿಟ್‌ನೆಸ್ ಪಡೆದಿರುವ ಜಯಂತ್ ಯಾದವ್ ಉತ್ತಮ ಪ್ರದರ್ಶನದ ಮೂಲಕ ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್‌ನ ಮನಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊಹಾಲಿ ಟೆಸ್ಟ್‌ನ ವೇಳೆ ಭುಜನೋವಿಗೆ ಒಳಗಾಗಿ ಚೇತರಿಸಿಕೊಂಡಿದ್ದ ಹಾರ್ದಿಕ್ ಇತ್ತೀಚೆಗೆ ಕೊನೆಗೊಂಡ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆಡಿದ್ದರು. ಜಯಂತ್ ಇತ್ತೀಚೆಗೆ ಕೊನೆಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರ್ಯಾಣದ ಪರ ಆಡಿದ್ದರು.
ಈ ಇಬ್ಬರು ಆಟಗಾರರು ಹಾಗೂ ಮೀಸಲು ಆರಂಭಿಕ ಆಟಗಾರ ಅಭಿನವ್ ಮುಕುಂದ್ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಜಿಮ್ಖಾನಾ ಗ್ರೌಂಡ್‌ನಲ್ಲಿ ಮುಶ್ಫಿಕುರ್ರಹೀಂ ನೇತೃತ್ವದ ತಂಡದ ವಿರುದ್ಧ ನೀಡುವ ಪ್ರದರ್ಶನ ಹೆಚ್ಚು ಮಹತ್ವ ಪಡೆದಿದೆ. ಕೆಎಲ್ ರಾಹುಲ್ ಅಥವಾ ಮುರಳಿ ವಿಜಯ್ ಗಾಯಗೊಂಡರೆ ಮಾತ್ರ ಮುಕುಂದ್‌ಗೆ ಆಡುವ 11 ಬಳಗದಲ್ಲಿ ಸ್ಥಾನ ಪಡೆಯುವ ಅವಕಾಶ ಲಭಿಸಲಿದೆ. ಹಾರ್ದಿಕ್ ಹಾಗೂ ಜಯಂತ್‌ಗೆ ಈ ಪಂದ್ಯ ಅತ್ಯಂತ ಮುಖ್ಯವಾಗಿದ್ದು, ನಾಯಕ ವಿರಾಟ್ ಕೊಹ್ಲಿ, ಕೋಚ್ ಅನಿಲ್ ಕುಂಬ್ಳೆ ಆಲ್‌ರೌಂಡರ್ ಸ್ಥಾನಕ್ಕೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು.
ರಣಜಿ ಋತುವಿನಲ್ಲಿ ಸಮಾಧಾನಕರ ಪ್ರದರ್ಶನ ನೀಡಿರುವ ತಮಿಳುನಾಡಿನ ಮುಕುಂದ್ ಬಾಂಗ್ಲಾ ವಿರುದ್ಧ ಅಬ್ಬರಿಸಿದರೆ ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವಕಾಶ ಪಡೆಯಬಹುದು.
ರಣಜಿ ಟ್ರೋಫಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿರುವ ಪ್ರಿಯಾಂಕ್ ಪಾಂಚಾಲ್ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಆಟಗಾರರಾದ ತಸ್ಕಿನ್ ಅಹ್ಮದ್ ಹಾಗೂ ಶಾಕಿಬ್ ಅಲ್-ಹಸನ್ ದಾಳಿಯನ್ನು ಎದುರಿಸಬೇಕಾಗಿದೆ. ಇಬ್ಬರು ಯುವ ಆಟಗಾರರಾದ ಇಶಾನ್ ಕಿಶನ್ ಹಾಗೂ ರಿಷಬ್ ಪಂತ್‌ಗೆ ಕೂಡ ತಮ್ಮ ಪ್ರತಿಭೆ ತೋರಿಸಲು ಇದೊಂದು ಅವಕಾಶವಾಗಿದೆ.
ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್‌ಗೆ ರಹೀಂ, ತಮೀಮ್ ಇಕ್ಬಾಲ್ ಹಾಗೂ ಮೊಮಿನುಲ್ ಹಕ್‌ರಂತಹ ಆಟಗಾರರ ವಿರುದ್ಧ ತನ್ನ ಕೌಶಲ್ಯ ಪ್ರದರ್ಶಿಸಲು ಉತ್ತಮ ಅವಕಾಶ ಲಭಿಸಿದೆ.
ಇಬ್ಬರು ಎಡಗೈ ವೇಗಿಗಳಾದ ಅನಿಕೇತ್ ಚೌಧರಿ ಹಾಗೂ ಚಾಮಾ ಮಿಲಿಂದ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆಂಬ ಕುತೂಹಲ ಎಲ್ಲರಲ್ಲಿದೆ. ಝಹೀರ್ ಖಾನ್ ನಿವೃತ್ತಿಯ ಬಳಿಕ ಭಾರತ ಎಲ್ಲ ಮಾದರಿಯ ಪಂದ್ಯದಲ್ಲಿ ಎಡಗೈ ವೇಗಿಯ ಹುಡುಕಾಟದಲ್ಲಿದೆ. ಹಿರಿಯ ವೇಗದ ಬೌಲರ್ ಆಶೀಷ್ ನೆಹ್ರಾ ಈಗಲೂ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ. ತಂಡಗಳು: ಭಾರತ ಎ: ಅಭಿನವ್ ಮುಕುಂದ್(ನಾಯಕ), ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಐಯ್ಯರ್, ಇಶಾಂಕ್ ಜಗ್ಗಿ, ರಿಷಬ್ ಪಂತ್, ಇಶಾನ ಕಿಶನ್(ವಿ.ಕೀಪರ್), ವಿಜಯ್ ಕುಮಾರ್, ಹಾರ್ದಿಕ್ ಪಾಂಡ್ಯ, ಶಹಬಾಝ್ ನದೀಮ್, ಜಯಂತ್ ಯಾದವ್, ಕುಲ್‌ದೀಪ್ ಯಾದವ್, ಅನಿಕೇತ್ ಚೌಧರಿ, ಚಾಮಾ ಮಿಲಿಂದ್, ನಿತಿನ್ ಸೈನಿ.
ಬಾಂಗ್ಲಾದೇಶ: ಮುಶ್ಫಿಕುರ್ರಹೀಂ(ನಾಯಕ, ವಿಕೆಟ್‌ಕೀಪರ್), ಇಮ್ರುಲ್ ಕಯೆಸ್,ತಮೀಮ್ ಇಕ್ಬಾಲ್, ಮೊಮಿನುಲ್ ಹಕ್, ಮಹಮುದುಲ್ಲಾ, ಶಬ್ಬೀರ್ರಹ್ಮಾನ್, ಶಾಕಿಬ್ ಅಲ್ ಹಸನ್, ಲಿಟನ್ ದಾಸ್, ತಸ್ಕಿನ್ ಅಹ್ಮದ್, ಸುಭಾಶಿಸ್‌ರಾಯ್, ಕಮ್ರುಲ್ ಇಸ್ಲಾಮ್, ಸೌಮ್ಯ ಸರ್ಕಾರ್, ತೈಜುಲ್ ಇಸ್ಲಾಮ್, ಶಫಿವುಲ್ ಇಸ್ಲಾಮ್, ಮೆಹೆದಿ ಹಸನ್.