‘ಜಾಗತಿಕ’ ಟ್ವೆಂಟಿ-20 ಲೀಗ್ ಘೋಷಿಸಿದ ಕ್ರಿಕೆಟ್ ದಕ್ಷಿಣ ಆಫ್ರಿಕ
ಜೋಹಾನ್ಸ್‌ಬರ್ಗ್, ಫೆ.4: ಕ್ರಿಕೆಟ್ ದಕ್ಷಿಣ ಆಫ್ರಿಕ ಶನಿವಾರ ಜಾಗತಿಕ ಟ್ವೆಂಟಿ-20 ಲೀಗ್ ಯೋಜನೆಯನ್ನು ಘೋಷಿಸಿದ್ದು, ಈಮೂಲಕ ಜಾಗತಿಕ ಬಂಡವಾಳ ಹಾಗೂ ಖ್ಯಾತ ಆಟಗಾರರನ್ನು ಸೆಳೆಯುವ ವಿಶ್ವಾಸದಲ್ಲಿದೆ.
ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹಾಗೂ ಆಸ್ಟ್ರೇಲಿಯದ ಬಿಗ್‌ಬಾಶ್ ಲೀಗ್(ಬಿಪಿಎಲ್)ಯಶಸ್ಸಿನಿಂದ ಉತ್ತೇಜಿತಗೊಂಡು ಟ್ವೆಂಟಿ-20 ಗ್ಲೋಬಲ್ ಲೀಗ್ ಆರಂಭಿಸಲು ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಆದರೆ, ಟೂರ್ನಿಯ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ.
8 ಫ್ರಾಂಚೈಸಿಗಳು ಮಾರಾಟವಾಗಿದ್ದು, ನಗರ ಮೂಲದ ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕದ ಪ್ರಮುಖ ಆಟಗಾರರು ಹಾಗೂ ವಿಶ್ವದ ಸ್ಟಾರ್ ಆಟಗಾರರ ಲಭ್ಯತೆಯನ್ನು ಆಧರಿಸಿ ಟೂರ್ನಿಯನ್ನು 2017ರ ಅಂತ್ಯಕ್ಕೆ ನಿಗದಿಪಡಿಸಲಾಗಿದೆ. ಆಸಕ್ತರು ಟೆಂಡರ್‌ನ್ನು ಮಾ.3ರೊಳಗೆ ಸಲ್ಲಿಸಬೇಕು.
‘‘ನಾವು ಆಯ್ಕೆ ಮಾಡಿರುವ ಟೂರ್ನಿಯ ಸಮಯ ಫ್ರಾಂಚೈಸಿಗಳಿಗೆ ವಿಶ್ವ ದರ್ಜೆ ಆಟಗಾರರನ್ನು ದಕ್ಷಿಣ ಆಫ್ರಿಕಕ್ಕೆ ಸೆಳೆಯಲು ಪೂರಕವಾಗಿದೆ ಎಂದು ಭಾವಿಸಿದ್ದೇವೆ. ದಕ್ಷಿಣ ಆಫ್ರಿಕದಲ್ಲಿ ಹೊಸ ಟ್ವೆಂಟಿ-20 ಲೀಗ್ ಆರಂಭಿಸುವುದು ನಮ್ಮ ಉದ್ದೇಶ. ಈ ಮೂಲಕ ಶ್ರೇಷ್ಠ ಪ್ರದರ್ಶನ ಹಾಗೂ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ದೂರದೃಷ್ಟಿಯಿದೆ’’ ಎಂದು ಸಿಎಸ್‌ಎ ಸಿಇಒ ಹರೂನ್ ಲಾರ್ಗಟ್ ಹೇಳಿದ್ದಾರೆ.