×
Ad

ಬಿಸಿಸಿಐ ವಿರೋಧದ ನಡುವೆ ಆದಾಯ ಹಂಚಿಕೆ ವ್ಯವಸ್ಥೆಯ ಬದಲಾವಣೆಗೆೆ ಐಸಿಸಿ ಮಂಡಳಿ ನಿರ್ಧಾರ

Update: 2017-02-04 23:37 IST

ದುಬೈ, ಫೆ.4: ಐಸಿಸಿನ ಮುಖ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐಸಿಸಿಯ ಆದಾಯ ಹಂಚಿಕೆ ವ್ಯವಸ್ಥೆಯ ಬದಲಾವಣೆಗೆ ಐಸಿಸಿ ಮಂಡಳಿಯ ಹೆಚ್ಚಿನ ಸದಸ್ಯರು ಬೆಂಬಲ ವ್ಯಕ್ತಪಡಿಸಿದರೆ, ಬಿಸಿಸಿಐ ಪ್ರತಿನಿಧಿ ವಿಕ್ರಂ ಲಿಮಯೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಜಾರಿಗೆ ತಂದಿದ್ದ ‘ಬಿಗ್ ತ್ರಿ’ ವ್ಯವಸ್ಥೆಗೆ ಭಾರತ ಹಾಗೂ ಶ್ರೀಲಂಕಾ ಮಾತ್ರ ಬೆಂಬಲ ನೀಡಿದರೆ, ಝಿಂಬಾಬ್ವೆ ತಟಸ್ಥ ನಿಲುವು ತಾಳಿತು. ಪಾಕಿಸ್ತಾನ, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ, ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಆದಾಯ ಹಂಚಿಕೆ ಹಾಗೂ ಆಡಳಿತ ವ್ಯವಸ್ಥೆಯ ಬದಲಾವಣೆಯ ಪರ ಮತ ಚಲಾಯಿಸಿದವು.

ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಗಳು ‘ಬಿಗ್ ತ್ರಿ’ ವ್ಯವಸ್ಥೆಯ ಮೂಲಕ ಐಸಿಸಿ ಆದಾಯದ ಸಿಂಹಪಾಲು ಆದಾಯ ಪಡೆಯಲು ಅರ್ಹತೆ ಪಡೆದಿದ್ದವು. ‘ಬಿಗ್ ತ್ರಿ’ ವ್ಯವಸ್ಥೆಯ ಬಗ್ಗೆ ಸ್ವತಃ ಇಂಗ್ಲೆಂಡ್, ಆಸ್ಟ್ರೇಲಿಯ ಸಹಿತ ಎಲ್ಲ ಟೆಸ್ಟ್ ಆಡುವ ದೇಶಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ತಾನು ಐಸಿಸಿ ಮಂಡಳಿಯ ‘ನಂಬಿಕೆ’ ಹಾಗೂ ‘ಸಮಾನತೆ’ಯನ್ನು ಆಧರಿಸಿದ ಅಧಿಕೃತ ಮೂಲ ದಾಖಲೆಯ ಬಗ್ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದೆ. ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಕೂಡ ಇನ್ನಷ್ಟು ಕಾಲ ಕಾಯಲು ಬಯಸಿದ್ದು, ಈ ವಿಷಯಕ್ಕೆ ಸಂಬಂಧಿಸಿ ಮತದಾನ ಮಾಡಬೇಕಾದ ಸಂದರ್ಭ ಬಂದಾಗ ಬದಲಾವಣೆಯ ವಿರುದ್ಧ ಮತ ಹಾಕುವುದಾಗಿ ತಿಳಿಸಿದ್ದಾರೆ. ಇದಕ್ಕೆ ಯಾರೆಲ್ಲಾ ಪರವಾಗಿ ಮತಹಾಕಬೇಕೆಂದು ಹೇಳಲು ತಾನು ಬಯಸುವುದಿಲ್ಲ ಎಂದು ಅಧಿಕೃತ ಮೂಲ ದಾಖಲೆಯನ್ನು ನೋಡಿದ ಬಳಿಕ ಬಿಸಿಸಿಐ ಪ್ರತಿನಿಧಿ ವಿಕ್ರಂ ಹೇಳಿದ್ದಾರೆ.

ಐಸಿಸಿ ತನ್ನ ಈ ನಿರ್ಣಯವನ್ನು ಎಪ್ರಿಲ್‌ನಲ್ಲಿ ನಡೆಯಲಿರುವ ಮಂಡಳಿ ಸಭೆಯಲ್ಲಿ ಅನುಮೋದಿಸುವ ಸಾಧ್ಯತೆಯಿದೆ. ಶುಕ್ರವಾರ ನಡೆದ ಐಸಿಸಿನ ಮುಖ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆ ಮಾಡಲು ಚಿಂತಿಸಲಾಗಿದ್ದು, ಪಂದ್ಯಗಳಿಗೆ ಮತ್ತಷ್ಟು ಆಕರ್ಷಣೆ ತರಲು ಲೀಗ್ ಮಾದರಿಯನ್ನು ಜಾರಿಗೆ ತರಲು ಯೋಚಿಸಲಾಗಿದೆ. ಶುಕ್ರವಾರದ ಈ ಬೆಳವಣಿಗೆಯು ಬಿಸಿಸಿಐಯನ್ನು ಆತಂಕಕ್ಕೀಡು ಮಾಡಿದೆ.

ಐಸಿಸಿ ಹೊಸ ಬದಲಾವಣೆಯತ್ತ ದಿಟ್ಟ ಹೆಜ್ಜೆ ಇಟ್ಟರೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಮುಂಬರುವ 2017ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಬಹಿಷ್ಕರಿಸಲು ನಿರ್ಧರಿಸುವುದಲ್ಲದೆ, ಎಲ್ಲ ದ್ವಿಪಕ್ಷೀಯ ಸರಣಿಯಿಂದ ದೂರವುಳಿಯಲು ನಿರ್ಧರಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ 13 ತಂಡಗಳಿರುವ ಎರಡು ಹಂತದ ಟೆಸ್ಟ್ ಲೀಗ್ ನಡೆಸಲು ಪ್ರಸ್ತಾವನೆ ಸಲ್ಲಿಸಿದ್ದು, ಈ ಲೀಗ್ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯುವ ತಂಡಗಳನ್ನು ನಿರ್ಧರಿಸಲಿದೆ.

ಪ್ರಮುಖ ಹಂತದ ಲೀಗ್‌ನಲ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿರುವ ಅಗ್ರ-9 ತಂಡಗಳು ಇರಲಿವೆ. ಝಿಂಬಾಬ್ವೆ, ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳ ಸಹಿತ ಇತರ ಅಸೋಸಿಯೇಟ್ ತಂಡಗಳು ಎರಡನೆ ಹಂತದಲ್ಲಿ ಇರಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News