×
Ad

ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಜಯಿಸಿದ ದ.ಆಫ್ರಿಕ

Update: 2017-02-05 23:39 IST

  ಜೋಹಾನ್ಸ್‌ಬರ್ಗ್, ಫೆ.5: ನಾಯಕ ಎಬಿಡಿವಿಲಿಯರ್ಸ್ ಆಕರ್ಷಕ ಅರ್ಧಶತಕ(ಅಜೇಯ 60ರನ್), ಸಾಂಘಿಕ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.

ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದ ಆಫ್ರಿಕನ್ನರು ಸರಣಿಯನ್ನು ಇನ್ನೂ 2 ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡರು.

ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 3ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಪ್ರಿಟೋರಿಯಸ್(3-19), ರಬಾಡ(2-39),ಫೆಲುಕ್‌ವಾಯೊ(2-26) ಹಾಗೂ ಇಮ್ರಾನ್ ತಾಹಿರ್(2-21) ದಾಳಿಗೆ ಸಿಲುಕಿ 39.2 ಓವರ್‌ಗಳಲ್ಲಿ ಕೇವಲ 163 ರನ್‌ಗೆ ಆಲೌಟಾಯಿತು.

ಲಂಕೆಯ ಪರ ಆರಂಭಿಕ ಆಟಗಾರ ಡೆಕ್‌ವೆಲ್ಲಾ(74, 80 ಎಸೆತ, 7 ಬೌಂಡರಿ) ಏಕಾಂಗಿ ಹೋರಾಟ ನೀಡಿದರೆ, ನಾಯಕ ತರಂಗ(31),ಧನಂಜಯ್ ಡಿ’ಸಿಲ್ವ(16), ಪಥಿರನ(18) ಎರಡಂಕೆ ದಾಟಿದರು. ಉಳಿದವರು ವಿಫಲರಾದರು.

ಗೆಲ್ಲಲು ಸುಲಭ ಸವಾಲು ಪಡೆದ ಆಫ್ರಿಕ ತಂಡ 32 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ನಾಯಕ ಡಿವಿಲಿಯರ್ಸ್(ಅಜೇಯ 60, 61 ಎಸೆತ, 5 ಬೌಂಡರಿ), ಹಾಶಿಮ್ ಅಮ್ಲ(34), ಜೆಪಿ ಡುಮಿನಿ(ಅಜೇಯ 28), ಪ್ಲೆಸಿಸ್(24) ತಂಡಕ್ಕೆ 108 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.

92 ರನ್‌ಗೆ 3 ವಿಕೆಟ್ ಕಳೆದುಕೊಂಡ ಆಫ್ರಿಕ ತಂಡವನ್ನು ಆಧರಿಸಿದ ಡಿವಿಲಿಯರ್ಸ್ ಹಾಗೂ ಡುಮಿನಿ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 72 ರನ್ ಸೇರಿಸಿ ಗೆಲುವು ಸುಲಭವಾಗಿಸಿದರು.

ಯಶಸ್ವಿ ಬೌಲರ್ ಡ್ವೆಯ್ನೆ ಪ್ರಿಟೋರಿಯಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News