×
Ad

ಟ್ವಿಟರ್‌ನಲ್ಲಿ ಶ್ರೀಶಾಂತ್-ಆಕಾಶ್ ಚೋಪ್ರಾ ವಾಗ್ವಾದ

Update: 2017-02-05 23:44 IST

ಹೊಸದಿಲ್ಲಿ, ಫೆ.5: ಸ್ಪಾಟ್‌ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಲ್ಪಟ್ಟ ಬಳಿಕ ಭಾರತದ ಮಾಜಿ ವೇಗದ ಬೌಲರ್ ಶ್ರೀಶಾಂತ್ 2013ರಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. 2015ರಲ್ಲಿ ದೋಷಮುಕ್ತಗೊಂಡಿರುವ ಕೇರಳದ ಬೌಲರ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಲು ಕಾಯುತ್ತಿದ್ದಾರೆ.

ವೀಕ್ಷಕವಿವರಣೆಗಾರನಾಗಿ ಪರಿವರ್ತಿತ ಕ್ರಿಕೆಟಿಗ ಆಕಾಶ್ ಚೋಪ್ರಾರೊಂದಿಗೆ ಇತ್ತೀಚೆಗೆ ಟ್ವಿಟರ್‌ನಲ್ಲಿ ವಾಗ್ವಾದ ನಡೆಸಿದ್ದ ಶ್ರೀಶಾಂತ್ ಮತ್ತೊಮ್ಮೆ ಕೆಟ್ಟ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಶ್ರೀಶಾಂತ್ ಕ್ರಿಕೆಟ್‌ಗೆ ವಾಪಸಾಗುವುದನ್ನು ಚೋಪ್ರಾ ವಿರೋಧಿಸಿದ್ದೇ ಈ ಇಬ್ಬರ ನಡುವಿನ ಟ್ವಿಟ್ಟರ್ ಸಮರಕ್ಕೆ ಕಾರಣವಾಗಿದೆ.

ಶ್ರೀಶಾಂತ್‌ಗೆ ಕ್ರಿಕೆಟ್‌ಗೆ ವಾಪಸಾಗಲು ಅವಕಾಶ ನೀಡಬೇಕೇ, ಅದಕ್ಕೆ ನಿಮ್ಮ ಅಭಿಪ್ರಾಯವೇನು? ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಚೋಪ್ರಾರಲ್ಲಿ ಟ್ವಿಟರ್‌ನ ಮೂಲಕ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಚೋಪ್ರಾ, ನನ್ನ ಪ್ರಕಾರ ಇದು ಸರಿಯಲ್ಲ. ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಕ್ರಿಕೆಟಿಗನಿಗೆ ಮತ್ತೊಮ್ಮೆ ಆಡಲು ಅವಕಾಶ ನೀಡಲೇ ಬಾರದು ಎಂದು ಹೇಳಿದ್ದರು.

ಟ್ವಿಟರ್‌ನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿ ನನಗೆ ತುಂಬಾ ಬೇಸರವಾಯಿತು. ನಿಮ್ಮ ದ್ವಂದ್ವ ನಿಲುವು ನನಗೆ ಹಿಡಿಸಲಿಲ್ಲ. ನಾನು ಮತ್ತೊಮ್ಮೆ ಭಾರತ ತಂಡದಲ್ಲಿ ಆಡುತ್ತೇನೆಂದು ಚೋಪ್ರಾಗೆ ಟ್ವೀಟ್ ಮಾಡಿದ ಶ್ರೀಶಾಂತ್ ನಾನು ಆಡುವ ಪಂದ್ಯದಲ್ಲಿ ನೀವು ವೀಕ್ಷಕವಿವರಣೆ ನೀಡಬಹುದೆಂಬ ವಿಶ್ವಾಸದಲ್ಲಿದ್ದೇನೆಂದು ಮೂದಲಿಸಿದರು.

ಚೋಪ್ರಾ ಭಾರತದ ಪರ ಕೇವಲ 10 ಪಂದ್ಯಗಳನ್ನು ಆಡಿದ್ದಾರೆ.ಆದರೆ, ಶ್ರೀಶಾಂತ್ 27 ಟೆಸ್ಟ್, 53 ಏಕದಿನ ಪಂದ್ಯಗಳನ್ನು ಆಡಿದ್ದು, 2007,2011ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಸ್ಕಾಟ್ಲೆಂಡ್‌ನಲ್ಲಿ ಲೀಗ್ ಪಂದ್ಯ ಆಡಲು ಶ್ರೀಶಾಂತ್‌ಗೆ ಬಿಸಿಸಿಐ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ನೀಡಲು ನಿರಾಕರಿಸಿದ ಕಾರಣ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗುವ ಅವರ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News