×
Ad

ಅಂಡರ್-19 ಏಕದಿನ ಸರಣಿ: ಭಾರತಕ್ಕೆ ಭರ್ಜರಿ ಜಯ

Update: 2017-02-06 23:08 IST

ಮುಂಬೈ, ಫೆ.6: ಪೃಥ್ವಿ ಶಾ ಹಾಗೂ ಶುಭಂ ಗಿಲ್ ದಾಖಲಿಸಿದ ಆಕರ್ಷಕ ಶತಕಗಳ ನೆರವಿನಿಂದ ಭಾರತ ತಂಡ ಅಂಡರ್-19  ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧದ 4ನೆ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದುಕೊಂಡಿದೆ.

 ಸೋಮವಾರ ಇಲ್ಲಿ ನಡೆದ 4ನೆ ಏಕದಿನ ಪಂದ್ಯವನ್ನು 230 ರನ್‌ಗಳ ಅಂತರದಿಂದ ಗೆದ್ದುಕೊಂಡಿರುವ ಭಾರತ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಗ್ರ ಕ್ರಮಾಂಕದ ಆಟಗಾರರಾದ ಗಿಲ್ ಹಾಗೂ ಶಾ ಶತಕದ ಬೆಂಬಲದಿಂದ 9 ವಿಕೆಟ್‌ಗಳ ನಷ್ಟಕ್ಕೆ 382 ರನ್ ಗಳಿಸಿತು. ಭಾರತದ ವೇಗಿಗಳಾದ ಕಮಲೇಶ್ ನಗರ್‌ಕೋಟಿ(4-31), ವಿವೇಕಾನಂದ ತಿವಾರಿ(3-20) ಹಾಗೂ ಶಿವಂ ಮಾವಿ(2-18) ಸಂಘಟಿತ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಅಂಡರ್-19 ತಂಡ 37.4 ಓವರ್‌ಗಳಲ್ಲಿ ಕೇವಲ 152 ರನ್‌ಗೆ ಆಲೌಟಾಯಿತು.

 ಶಿವಂ ಹಾಗೂ ಕಮಲೇಶ್ ಇಂಗ್ಲೆಂಡ್‌ನ ಮೊದಲೆರಡು ವಿಕೆಟ್‌ಗಳನ್ನು ಕಬಳಿಸಿದಾಗ ತಂಡ ಸ್ಕೋರ್ 2 ವಿಕೆಟ್‌ಗೆ 9 ರನ್. ಶಿವಂ ಮತ್ತೊಂದು ವಿಕೆಟ್ ಪಡೆದಾಗ ಇಂಗ್ಲೆಂಡ್ 16 ರನ್‌ಗೆ 3ನೆ ವಿಕೆಟ್ ಕಳೆದುಕೊಂಡಿತು.

ಇಂಗ್ಲೆಂಡ್‌ನ ಪರ ಒಲ್ಲಿ ಪೋಪ್(59) ಗರಿಷ್ಠ ಸ್ಕೋರ್ ದಾಖಲಿಸಿದರು. ವಿಲ್ ಜಾಕ್ಸ್(44) ಎರಡಂಕೆ ಸ್ಕೋರ್ ದಾಖಲಿಸಿದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಅಂಡರ್-19 ತಂಡ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿತು. 2004ರಲ್ಲಿ ಢಾಕಾದಲ್ಲಿ ಭಾರತದ ಕಿರಿಯರ ತಂಡ ಸ್ಕಾಟ್ಲೆಂಡ್ ವಿರುದ್ಧ ಗರಿಷ್ಠ 425 ರನ್ ಗಳಿಸಿತು.

ರಾಣಾ(33) ಔಟಾದ ಬಳಿಕ ಜೊತೆಯಾದ ಶಾ ಹಾಗೂ ಗಿಲ್ ಇಂಗ್ಲೆಂಡ್‌ನ ಸ್ಪಿನ್ನರ್‌ಗಳು ಹಾಗೂ ವೇಗಿಗಳನ್ನು ಚೆನ್ನಾಗಿ ದಂಡಿಸಿದರು. ಈ ಜೋಡಿ 2ನೆ ವಿಕೆಟ್‌ಗೆ 164 ಎಸೆತಗಳಲ್ಲಿ 231 ರನ್ ಜೊತೆಯಾಟ ನಡೆಸಿತು.

ಕಳೆದ ಪಂದ್ಯದಲ್ಲಿ 138 ರನ್ ಗಳಿಸಿದ್ದ ಗಿಲ್ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಕವರ್‌ಡ್ರೈವ್, ಸ್ವೀಪ್ಸ್, ಪುಲ್‌ಶಾಟ್ಸ್, ಸ್ಟ್ರೈಟ್‌ಡ್ರೈವ್ಸ್ಸ್ ಸಹಿತ ಹಲವು ರೀತಿಯ ಹೊಡೆತ ಬಾರಿಸಿದ್ದ ಗಿಲ್ 120 ಎಸೆತಗಳಲ್ಲಿ 23 ಬೌಂಡರಿ, 1 ಸಿಕ್ಸರ್‌ಗಳಿರುವ 160 ರನ್ ಗಳಿಸಿದರು. 115 ಎಸೆತಗಳಲ್ಲಿ 150 ರನ್ ಪೂರೈಸಿದರು.

 ಏಕದಿನ ಸರಣಿಯಲ್ಲಿ ಈವರೆಗೆ ದೊಡ್ಡ ಮೊತ್ತ ಗಳಿಸಲು ವಿಫಲವಾಗಿರುವ ಶಾ 89 ಎಸೆತಗಳನ್ನು ಎದುರಿಸಿದ್ದು, 12 ಬೌಂಡರಿ, 2 ಭರ್ಜರಿ ಸಿಕ್ಸರ್‌ಗಳನ್ನು ಒಳಗೊಂಡ 105 ರನ್ ಗಳಿಸಿದರು. ಮುಂಬೈನ ಯುವ ಆಟಗಾರ ಶಾ ಮಿಡ್-ವಿಕೆಟ್‌ನತ್ತ ಚೆಂಡನ್ನು ತಳ್ಳಿ ಒಂದು ರನ್ ಪಡೆದು ಶತಕ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ ಅಂಡರ್-19: 50 ಓವರ್‌ಗಳಲ್ಲಿ 382/9

(ಗಿಲ್ 160, ಶಾ 105, ಬ್ರೂಕ್ಸ್ 2-58)

ಇಂಗ್ಲೆಂಡ್ ಅಂಡರ್-19: 37.4 ಓವರ್‌ಗಳಲ್ಲಿ 152 ರನ್‌ಗೆ ಆಲೌಟ್

(ಪೋಪ್ 59, ಜಾಕ್ಸ್ 44, ನಗರಕೋಟಿ 4-31, ತಿವಾರಿ 3-20)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News