ಬ್ರಿಟನ್: ಮುಸ್ಲಿಮ್ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಡಿಮೆ

Update: 2017-02-07 15:22 GMT

ಲಂಡನ್, ಫೆ. 7: ಬ್ರಿಟನ್‌ನಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ನಡೆಯುವ ಸಂದರ್ಶನಗಳ ವೇಳೆ ಮುಸ್ಲಿಮ್ ಹೆಸರಿನ ಅರ್ಜಿಗಳನ್ನು ಪರಿಗಣಿಸುವ ಸಾಧ್ಯತೆಗಳು ವಿರಳ ಎಂದು ವರದಿಯೊಂದು ಹೇಳಿದೆ.

ಬಿಳಿಯ ಕ್ರೈಸ್ತರಿಗೆ ಹೋಲಿಸಿದರೆ ಮುಸ್ಲಿಮ್ ಪುರುಷರು ಈ ಹುದ್ದೆಗಳಿಗೆ ಆಯ್ಕೆಯಾಗುವ ಸಾಧ್ಯತೆ 76 ಶೇಕಡ ಕಡಿಮೆ ಎಂದು ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಜನಾಂಗೀಯತೆ ಮತ್ತು ಪೌರತ್ವ ಅಧ್ಯಯನಕ್ಕಾಗಿನ ಸಂಶೋಧನಾ ಕೇಂದ್ರ ನಡೆಸಿದ ಸಂಶೋಧನೆಯೊಂದು ತಿಳಿಸಿದೆ.

ತಾರತಮ್ಯದ ಬಗ್ಗೆ ಬಿಬಿಸಿಯು ಬ್ರಿಸ್ಟಲ್ ವಿಶ್ವವಿದ್ಯಾನಿಲಯದಲ್ಲಿರುವ ಸಾಮಾಜಿಕ ವಿಜ್ಞಾನಿಗಳ ಜೊತೆ ಸೇರಿ ಸಂಶೋಧನೆ ನಡೆಸಿತು. ಅದಕ್ಕಾಗಿ ‘ಆ್ಯಡಂ’ ಮತ್ತು ‘ಮುಹಮ್ಮದ್’ ಎಂಬ ಹೆಸರುಗಳಲ್ಲಿ ಎರಡು ಒಂದೇ ರೀತಿಯ ಸಿವಿ (ಸ್ವವಿವರ)ಗಳನ್ನು 100 ಸೇಲ್ಸ್ ಹುದ್ದೆಗಳಿಗೆ ಸಲ್ಲಿಸಿತು.

ಆ್ಯಡಮ್ ಎಂಬ ಇಂಗ್ಲಿಷ್ ಹೆಸರಿನ ಸಿವಿಗಳಿಗೆ 12 ಧನಾತ್ಮಕ ಪ್ರತಿಕ್ರಿಯೆಗಳು ಮತ್ತು ನಾಲ್ಕು ವಿಚಾರಣೆಗಳು ಬಂದವು. ಆದರೆ, ಮುಹಮ್ಮದ್ ಹೆಸರಿನ ಸಿವಿಗಳಿಗೆ ಕೇವಲ ನಾಲ್ಕು ಧನಾತ್ಮಕ ಪ್ರತಿಕ್ರಿಯೆಗಳು ಮತ್ತು ಎರಡು ವಿಚಾರಣೆಗಳು ಬಂದವು.

‘‘ಮುಸ್ಲಿಮ್ ಹೆಸರಿನ ಸಿವಿ ಹೊಂದಿರುವ ವ್ಯಕ್ತಿಗಳನ್ನು ಸಂದರ್ಶನಕ್ಕೆ ಆಹ್ವಾನಿಸುವ ಸಾಧ್ಯತೆ ಮೂರರಲ್ಲಿ ಒಂದು ಮಾತ್ರ ಎಂಬುದನ್ನು ನಾವು ಇಲ್ಲಿ ಕಂಡುಕೊಂಡೆವು’’ ಎಂದು ಕೇಂದ್ರದ ನಿರ್ದೇಶಕ ಪ್ರೊಫೆಸರ್ ತಾರೀಖ್ ಮೊದೂದ್ ಬಿಬಿಸಿಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News