ಬಿಸಿಸಿಐ ಹೊಸ ನಿಯಮ: ಬಿಸಿಸಿಐಗೆ ಭಾರೀ ನಷ್ಟ
ಹೊಸದಿಲ್ಲಿ, ಫೆ.10: ಐಸಿಸಿ ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಶಿಫಾರಸು ಮಾಡಿರುವ ಹೊಸ ಐಸಿಸಿ ಆದಾಯ ಸೂತ್ರದ ಅನ್ವಯ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಸುಮಾರು 180 ರಿಂದ 190 ಮಿಲಿಯನ್ ಡಾಲರ್ (ಸುಮಾರು 1270 ಕೋಟಿ ರೂ.) ಆದಾಯ ಕಳೆದುಕೊಳ್ಳಲಿದೆ.
2014ರಲ್ಲಿ ಎನ್.ಶ್ರೀನಿವಾಸನ್ ಪ್ರಸ್ತಾವಿಸಿರುವ ಹಣಕಾಸು ಮಾದರಿಯ ಪ್ರಕಾರ ಬಿಸಿಸಿಐ 2015 ರಿಂದ 2023ರ ನಡುವಿನ 8 ವರ್ಷಗಳ ಅವಧಿಯಲ್ಲಿ 440-445 ಮಿಲಿಯನ್ ಯುಎಸ್ ಡಾಲರ್ (ಅಂದಾಜು 2973.5 ಕೋ.ರೂ.)ಆದಾಯ ಗಳಿಸುವ ಸಾಧ್ಯತೆಯಿತ್ತು ಎಂದು ಇಎಸ್‌ಪಿಎನ್ ಕ್ರಿಕ್ ಇನ್‌ಫೋ ವರದಿ ಮಾಡಿದೆ.
ಐಸಿಸಿಯ ಪರಿಷ್ಕೃತ ಆದಾಯದ ಸೂತ್ರದ ಪ್ರಕಾರ ಬಿಸಿಸಿಐ 8 ವರ್ಷಗಳ ಅವಧಿಯಲ್ಲಿ 255 ರಿಂದ 260 ಮಿಲಿಯನ್ ಡಾಲರ್(ಸುಮಾರು 1737.2 ಕೋ.ರೂ.) ಗಳಿಸಲಿದೆ. ಟೆಸ್ಟ್ ಆಡುವ ಎಲ್ಲ ದೇಶಗಳಿಗಿಂತ ಭಾರತ ಗರಿಷ್ಠ ಆದಾಯ ಗಳಿಸಲಿದೆ. ಐಸಿಸಿ ಹೊಸ ಸೂತ್ರವನ್ನು ಜಾರಿಗೆ ತರಲು ಬಯಸಿದ್ದು, ಹೆಚ್ಚಿನ ಪೂರ್ಣ ಸದಸ್ಯ ರಾಷ್ಟ್ರಗಳು ಬದಲಾವಣೆಯ ಪರ ಮತ ಹಾಕಿವೆ. ಈ ವಿಷಯದ ಕುರಿತ ಅಂತಿಮ ನಿರ್ಧಾರ ಎಪ್ರಿಲ್‌ನಲ್ಲಿ ಹೊರಬರಲಿದೆ.
2014ರಲ್ಲಿ ಶ್ರೀನಿವಾಸನ್ ಐಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಿಗ್ ತ್ರೀ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ವ್ಯವಸ್ಥೆಯ ಪ್ರಕಾರ ಅಗ್ರ ಮೂರು ಕ್ರಿಕೆಟ್ ಮಂಡಳಿಗಳಾದ ಬಿಸಿಸಿಐ, ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಹಾಗೂ ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ಐಸಿಸಿಗೆ ಬರುವ ಆದಾಯದಲ್ಲಿ ಸಿಂಹಪಾಲು ಈ ಮೂರು ಕಿರಕೆಟ್ ಮಂಡಳಿಗೆ ಸಲ್ಲಬೇಕು.
ಆದರೆ, ಕಳೆದ ವರ್ಷ ಶಶಾಂಕ್ ಮನೋಹರ್ ಐಸಿಸಿ ಚೇರ್‌ಮನ್ ಆದ ಬಳಿಕ ಆದಾಯ ವ್ಯವಸ್ಥೆಯ ಸೂತ್ರವನ್ನು ಬದಲಿಸಲು ಆದ್ಯತೆ ನೀಡಿದ್ದರು.
ಆದಾಯ ಸೂತ್ರ ಬದಲಾವಣೆಯಿಂದಾಗಿ ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಆಫ್ರಿಕ, ನ್ಯೂಝಿಲೆಂಡ್, ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಲಾಭ ಪಡೆಯಲಿವೆ. ಎಲ್ಲ ಆರು ಸದಸ್ಯ ರಾಷ್ಟ್ರಗಳು ಸುಮಾರು 110-115 ಮಿ.ಡಾಲರ್ ಆದಾಯ ಗಳಿಸಲಿವೆ.