ಡೋಪಿಂಗ್ ಪ್ರಕರಣ: ರಶ್ಯದ ಅಥ್ಲೀಟ್‌ಗೆ ಒಂದು ಪದಕ ನಷ್ಟ
ಲಾಸನ್, ಫೆ.10: ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಕ್ರೀಡಾ ಟ್ರಿಬ್ಯೂನಲ್ ಲಂಡನ್ ಒಲಿಂಪಿಕ್ಸ್‌ನಲ್ಲಿ 800 ಮೀ.ಓಟದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ರಶ್ಯದ ಅಥ್ಲೀಟ್ ಮರಿಯಾ ಸವಿನೊವಾ-ಫಾರ್ನೊಸೊವಾರಿಂದ ಪದಕವನ್ನು ಹಿಂಪಡೆದುಕೊಂಡಿದೆ. ಮಾತ್ರವಲ್ಲ ನಾಲ್ಕು ವರ್ಷ ನಿಷೇಧ ಹೇರಿದೆ.
2010ರಲ್ಲಿ ಬಾರ್ಸಿಲೋನದಲ್ಲಿ ನಡೆದ ಯುರೋಪಿಯನ್ ಚಾಂಪಿಯನ್‌ಶಿಪ್‌ನಿಂದ ಆರಂಭವಾಗಿ 2013ರಲ್ಲಿ ಮಾಸ್ಕೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ತನಕ ಸರಿನೋವಾ ಉದ್ದೀಪನಾ ಮದ್ದು ಸೇವನೆಯಲ್ಲಿ ಭಾಗಿಯಾಗಿದ್ದಕ್ಕೆ ‘ಸ್ಪಷ್ಟ ಪುರಾವೆ’’ಗಳಿವೆ. 2012ರ ಲಂಡನ್ ಗೇಮ್ಸ್‌ನಲ್ಲಿ ಸವಿನೋವಾ ಭಾಗಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರಿಂದ ಪದಕ ಕಸಿದುಕೊಳ್ಳಬೇಕು ಎಂದು ಕ್ರೀಡಾ ಪಂಚಾಯತಿ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ರಶ್ಯದ ಅಥ್ಲೀಟ್ ವಿರುದ್ಧ ನಿಷೇಧ ಪ್ರಕ್ರಿಯೆ 2015ರ ಆಗಸ್ಟ್ 24 ರಿಂದ ಆರಂಭವಾಗಿದೆ. 2010ರ ಜುಲೈ 26 ರಿಂದ 2013ರ ಆ.19ರ ತನಕ ಗೆದ್ದುಕೊಂಡಿರುವ ಬಹುಮಾನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಸಿಎಎಸ್ ತಿಳಿಸಿದೆ.