ಕೊಹ್ಲಿಯ ವಿಶ್ವದಾಖಲೆಯ ಸಾಧನೆಗೆ ಕಾರಣವೇನು ಗೊತ್ತೆ?
ಹೈದರಾಬಾದ್, ಫೆ.11: ನಾಯಕತ್ವ ಹಾಗೂ ಫಿಟ್‌ನೆಸ್ ನನ್ನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾರಣ ಎಂದು ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
"ನನಗೆ ನಾಯಕತ್ವವೆಂಬ ಹೆಚ್ಚುವರಿ ಜವಾಬ್ದಾರಿ ಸತತ ನಾಲ್ಕು ಟೆಸ್ಟ್ ಸರಣಿಯಲ್ಲಿ ನಾಲ್ಕು ದ್ವಿಶತಕ ಬಾರಿಸಲು ಪೂರಕವಾಯಿತು. ನಾನು ಯಾವಾಗಲೂ ದೀರ್ಘ ಇನಿಂಗ್ಸ್ ಆಡಲು ಬಯಸುತ್ತೇನೆ. ನಾನು ದಾಖಲಿಸಿರುವ ಮೊದಲ ಏಳೆಂಟು ಶತಕಗಳು 120 ರನ್ ದಾಟಿರಲಿಲ್ಲ. ಆ ನಂತರ ನಾನು ಬ್ಯಾಟಿಂಗ್‌ನತ್ತ ಹೆಚ್ಚು ಗಮನ ನೀಡಿದೆ. ನನ್ನ ಉದ್ವೇಗವನ್ನು ಹಿಡಿತದಲ್ಲಿಟ್ಟುಕೊಂಡು, ಯಾವ ಹಂತದಲ್ಲೂ ಸಂತೃಪ್ತನಾಗದೇ ಆಡಿದ್ದೆ'' ಎಂದು 28ರ ಪ್ರಾಯದ ಬಲಗೈ ಬ್ಯಾಟ್ಸ್‌ಮನ್ ಹೇಳಿದ್ದಾರೆ.
ಟೆಸ್ಟ್ ಶತಕಗಳಿಂದ ನನಗೆ ತೃಪ್ತಿಯಿಲ್ಲ. ನನ್ನ ಫಿಟ್‌ನೆಸ್ ಮಟ್ಟ ಟೆಸ್ಟ್‌ನಲ್ಲಿ ದೀರ್ಘ ಇನಿಂಗ್ಸ್ ಆಡಲು, ದೊಡ್ಡ ಸ್ಕೋರ್‌ನತ್ತ ಚಿತ್ತವಿರಿಸಲು ನೆರವಾಗಿದೆ ಎಂದ ಕೊಹ್ಲಿ,‘‘ಕಳೆದ ಕೆಲವು ವರ್ಷಗಳಿಂದ ನನ್ನ ಫಿಟ್‌ನೆಸ್‌ನತ್ತ ಹೆಚ್ಚು ಕಾಳಜಿ ವಹಿಸಿದ್ದೇನೆ. ಇದು ಈಗ ನನಗೆ ತುಂಬಾ ನೆರವಿಗೆ ಬರುತ್ತಿದೆ. ನನಗೆ ಹಿಂದಿನಷ್ಟು ಆಯಾಸವಾಗುತ್ತಿಲ್ಲ. ಟೆಸ್ಟ್‌ನಲ್ಲಿ ಶತಕ ಗಳಿಸಿದಾಗ ನಾನು ತೃಪ್ತನಾಗುವುದಿಲ್ಲ. ಏಕೆಂದರೆ ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ಮಹತ್ವ ನೀಡುವೆ'' ಎಂದು ದಿಲ್ಲಿ ದಾಂಡಿಗ ಹೇಳಿದರು.