ಫುಟ್ಬಾಲ್ ಸ್ಟೇಡಿಯಂನಲ್ಲಿ ಕಾಲ್ತುಳಿತ: 17 ಮಂದಿ ಸಾವು
ಅಂಗೋಲಾ, ಫೆ.11: ಉತ್ತರ ಅಂಗೋಲಾದಲ್ಲಿ ಶುಕ್ರವಾರ ಫುಟ್ಬಾಲ್ ಸ್ಟೇಡಿಯಂವೊಂದರಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಕನಿಷ್ಠ 17 ಫುಟ್ಬಾಲ್ ಅಭಿಮಾನಿಗಳು ಮೃತಪಟ್ಟಿದ್ದಾರೆ. ಹಲವಾರು ಪ್ರೇಕ್ಷಕರು ಗಾಯಗೊಂಡಿದ್ದು, ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಅಂಗೋಲದ ಉಯಿಗೆ ಪಟ್ಟಣದಲ್ಲಿ ಸಂತ ರೀಟಾ ಕಾಸ್ಸಿಯಾ ಹಾಗೂ ರಿಕ್ರಿಯೇಟಿವೊ ಡಿ ಲಿಬೊಲೊ ಕ್ಲಬ್‌ಗಳ ನಡುವಿನ ದೇಶೀಯ ಲೀಗ್ ಫುಟ್ಬಾಲ್ ಪಂದ್ಯದ ವೇಳೆ ಈ ಅನಾಹುತ ಸಂಭವಿಸಿದೆ.
‘‘ನೂರಾರು ಜನರು ಅದಾಗಲೇ ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನೊಳಗೆ ಪಂದ್ಯ ವೀಕ್ಷಿಸಲು ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 17 ಜನರು ಮೃತಪಟ್ಟಿದ್ದು, 56 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ’’ ಎಂದು ಪೊಲೀಸ್ ವಕ್ತಾರ ಒರ್ಲಾಂಡೊ ಫೆರ್ನಾಂಡೊ ತಿಳಿಸಿದ್ದಾರೆ.
ಮೃತಪಟ್ಟವರ ಪೈಕಿ ಅಪರಿಚಿತ ಮಕ್ಕಳು ಸೇರಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಟಗಾರರು ಮೈದಾನದಲ್ಲಿದ್ದರು. ಹೊರಗಿನಿಂದ ಬಂದ ಟಿಕೆಟ್ ರಹಿತ ಅಭಿಮಾನಿಗಳು ಒಮ್ಮೆಲೇ ನುಗ್ಗಿದ ರಭಸಕ್ಕೆ ಗೇಟ್ ಓಪನ್ ಆಗಿದೆ. ಆಗ ಹಲವು ಜನರು ಕೆಳಗೆ ಬಿದ್ದಾಗ ಕಾಲ್ತುಳಿತ ಉಂಟಾಗಿದೆ ಎಂದು ಫುಟ್ಬಾಲ್ ಕ್ಲಬ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಫಿಫಾ ವಿಶ್ವ ರ್ಯಾಂಕಿಂಗ್‌ನಲ್ಲಿ 148ನೆ ರ್ಯಾಂಕಿನಲ್ಲಿರುವ ಅಂಗೋಲಾ ತಂಡ ಆಫ್ರಿಕ ಫುಟ್ಬಾಲ್‌ನಲ್ಲಿ ಸಾಧಾರಣ ತಂಡವೆನಿಸಿಕೊಂಡಿದೆ.
ಜನಜಂಗುಳಿಯನ್ನು ನಿಯಂತ್ರಣದಲ್ಲಿ ಆಗುವ ಲೋಪ, ಅಪಾಯಕಾರಿ ಸ್ಟೇಡಿಯಂ ಹಾಗೂ ಪ್ರೇಕ್ಷಕರ ಕೆಟ್ಟ ವರ್ತನೆಯಿಂದ ಫುಟ್ಬಾಲ್‌ನಲ್ಲಿ ಸಾಮಾನ್ಯವಾಗಿ ಕಾಲ್ತುಳಿತ, ಸ್ಟೇಡಿಯಂನೊಳಗೆ ಸಾವು-ನೋವು ಸಂಭವಿಸುತ್ತಿರುತ್ತದೆ.