ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಇರ್ಫಾನ್ ವಿಚಾರಣೆ
ಕರಾಚಿ,ಫೆ.11: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ(ಪಿಎಸ್‌ಎಲ್)ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಪಾಕ್ ಆಟಗಾರರಾದ ಶಾರ್ಜೀಲ್ ಖಾನ್ ಹಾಗೂ ಖಲಿದ್ ಲತೀಫ್‌ರನ್ನು ತಾತ್ಕಾಲಿಕವಾಗಿ ನಿಷೇಧಿಸಿದ ಬೆನ್ನಿಗೆ ಪಾಕಿಸ್ತಾನದ ವೇಗದ ಬೌಲರ್ ಮುಹಮ್ಮದ್ ಇರ್ಫಾನ್‌ರನ್ನು ವಿಚಾರಣೆ ನಡೆಸಲಾಗಿದೆ.
ಈ ಬೆಳವಣಿಗೆಯನ್ನು ಖಚಿತಪಡಿಸಿದ ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು, ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಇರ್ಫಾನ್ ಹಾಗೂ ಇತರ ಇಬ್ಬರು ಆಟಗಾರರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಪಿಸಿಬಿಯ ಭ್ರಷ್ಟಾಚಾರ ತಡೆ ಘಟಕ(ಎಸಿಯು) ಇರ್ಫಾನ್‌ರನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ. ಅವರು ತಕ್ಷಣಕ್ಕೆ ಯಾವುದೇ ಅಮಾನತು ಶಿಕ್ಷೆ ಎದುರಿಸುತ್ತಿಲ್ಲ. ಎಸಿಯು ಎಸ್. ಹಸನ್ ಹಾಗೂ ಬಾಬರ್‌ರನ್ನು ತನಿಖೆ ನಡೆಸುತ್ತಿದ್ದು, ಈ ಇಬ್ಬರು ಆಡುವುದನ್ನು ಮುಂದುರಿಸಲಿದ್ದಾರೆ. ಎಸಿಯು ಪಾಕಿಸ್ತಾನ ಸೂಪರ್ ಲೀಗ್‌ನ್ನು ಭ್ರಷ್ಟಾಚಾರದಿಂದ ರಕ್ಷಿಸಲು ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಪಿಸಿಬಿ ಚೇರ್ಮನ್ ನಜಮ್ ಸೇಥಿ ಹೇಳಿದ್ದಾರೆ.
ಶಂಕಿತ ಆಟಗಾರರು ದುಬೈ ಸ್ಟೇಡಿಯಂ ಹತ್ತಿರವಿರುವ ಫಾಸ್ಟ್ ಫುಡ್ ರೆಸ್ಟೋರೆಂಟ್‌ನಲ್ಲಿ ಬುಕ್ಕಿಗಳನ್ನು ಭೇಟಿ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. 2009ರಲ್ಲಿ ಪಾಕಿಸ್ತಾನ ಟ್ವೆಂಟಿ-20 ವಿಶ್ವಕಪ್ ಜಯಿಸಿದ ತಂಡದಲ್ಲಿದ್ದ ಹಸನ್ ಪ್ರಸ್ತುತ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಬಾಬರ್ ಕ್ವೆಟ್ಟಾ ಗ್ಲಾಡಿಯರ್ಸ್ ಪರ ಆಡುತ್ತಾರೆ.