ಹೈದರಾಬಾದ್ ಟೆಸ್ಟ್: ಬಾಂಗ್ಲಾದೇಶ ಪ್ರತಿ ಹೋರಾಟ
ಹೊಸದಿಲ್ಲಿ, ಫೆ.11: ಹಿರಿಯ ಆಟಗಾರರಾದ ಶಾಕಿಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ರಹೀಂ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರತಿ ಹೋರಾಟದ ಹಾದಿಯಲ್ಲಿದೆ.
ಏಕೈಕ ಟೆಸ್ಟ್ ಪಂದ್ಯದ 3ನೆ ದಿನದಾಟದಂತ್ಯದಲ್ಲಿ ಬಾಂಗ್ಲಾದೇಶ ತಂಡ 6 ವಿಕೆಟ್ ನಷ್ಟಕ್ಕೆ 322 ರನ್ ಕಲೆ ಹಾಕಿದೆ. ನಾಯಕ ರಹೀಂ(ಅಜೇಯ 81 ರನ್) ಹಾಗೂ ಮೆಹದಿ ಹಸನ್ ಮಿರಾಝ್(ಅಜೇಯ 51)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತದ ಮೊದಲ ಇನಿಂಗ್ಸ್ 687 ರನ್‌ಗೆ ಉತ್ತರಿಸಹೊರಟ ಬಾಂಗ್ಲಾದೇಶ ಒಂದು ಹಂತದಲ್ಲಿ 109 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 5ನೆ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿದ ಶಾಕಿಬ್-ರಹೀಂ ತಂಡವನ್ನು ಆಧರಿಸಿದರು. ಶಾಕಿಬ್(82 ರನ್, 103 ಎಸೆತ, 14 ಬೌಂಡರಿ) ವಿಕೆಟ್ ಕಬಳಿಸಿದ ಸ್ಪಿನ್ನರ್ ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸಿದರು. ಶಾಕಿಬ್ ವಿಕೆಟ್ ಪಡೆಯುವುದರೊಂದಿಗೆ ಚೆನ್ನೈ ಸ್ಪಿನ್ನರ್ ಅಶ್ವಿನ್ ಅತ್ಯಂತ ವೇಗವಾಗಿ 250 ಟೆಸ್ಟ್ ವಿಕೆಟ್ ಪೂರೈಸಿದರು.
ಶಬ್ಬೀರ್ರಹ್ಮಾನ್(16) ಬೇಗನೆ ಔಟಾದಾಗ ಬಾಂಗ್ಲಾದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 235 ರನ್. ಆಗ 7ನೆ ವಿಕೆಟ್‌ಗೆ ಸ್ಪಿನ್ನರ್ ಮಿರಾಝ್(ಅಜೇಯ 51) ಅವರೊಂದಿಗೆ ಕೈ ಜೋಡಿಸಿದ ನಾಯಕ ರಹೀಂ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸಿ ತಂಡದ ಮೊತ್ತವನ್ನು 3ನೆ ದಿನದಾಟದಂತ್ಯಕ್ಕೆ 322ಕ್ಕೆ ತಲುಪುವಂತೆ ಮಾಡಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಪೂರೈಸಿದ ಮುಶ್ಫಿಕುರ್ರಹೀಂ ಬ್ಯಾಟಿಂಗ್‌ನ್ನು ನಾಲ್ಕನೆ ದಿನಕ್ಕೆ ಕಾಯ್ದಿರಿಸಿದರು.
ಇದಕ್ಕೆ ಮೊದಲು 1 ವಿಕೆಟ್ ನಷ್ಟಕ್ಕೆ 41 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ ತಂಡ ನಿನ್ನೆಯ ಮೊತ್ತಕ್ಕೆ 3 ರನ್ ಸೇರಿಸುವಷ್ಟರಲ್ಲಿ ತಮೀಮ್ ಇಕ್ಬಾಲ್ ರನೌಟಾದರು. ಮುಮಿನುಲ್ ಹಕ್ 12 ರನ್‌ಗೆ ಔಟಾದಾಗ ಬಾಂಗ್ಲಾ 20 ರನ್‌ಗೆ 2 ವಿಕೆಟ್ ಕಳೆದುಕೊಂಡಿತು.
ಶಾಕಿಬ್ ಹಾಗೂ ಮಹಮುದುಲ್ಲಾ 4ನೆ ವಿಕೆಟ್‌ಗೆ 45 ರನ್ ಸೇರಿಸಿ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದರು. ಇಶಾಂತ್ ಶರ್ಮ ಈ ಜೋಡಿಯನ್ನು ಬೇರ್ಪಡಿಸಿದರು.
ಕಳೆದ ತಿಂಗಳು ನ್ಯೂಝಿಲೆಂಡ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ಶಾಕಿಬ್ 69 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 21ನೆ ಅರ್ಧಶತಕ ಪೂರೈಸಿದರು. ಸ್ಪಿನ್ ಹಾಗೂ ವೇಗದ ಬೌಲರ್‌ಗಳನ್ನು ಸಮನಾಗಿ ಎದುರಿಸಿದ ಎಡಗೈ ಬ್ಯಾಟ್ಸ್‌ಮನ್ ಶಾಕಿಬ್ ಬಾಂಗ್ಲಾ ಪ್ರತಿ ಹೋರಾಟ ನೀಡಲು ನೆರವಾದರು.
ಉಮೇಶ್ ಯಾದವ್ ಹಾಗೂ ಭುವನೇಶ್ವರ ಬೌಲಿಂಗ್‌ನ್ನು ದಿಟ್ಟವಾಗಿ ಎದುರಿಸಿದ ಶಾಕಿಬ್ ಅವರು ಮುಶ್ಫಿಕುರ್ರಹೀಂಗೆ ಉತ್ತಮ ಸಾಥ್ ನೀಡಿದರು. ಟೆಸ್ಟ್ ಇನಿಂಗ್ಸ್‌ನ ಕಳೆದೆರಡು ಇನಿಂಗ್ಸ್‌ನಲ್ಲಿ 466 ರನ್ ಸೇರಿಸಿರುವ ಶಾಕಿಬ್-ರಹೀಂ ಜೋಡಿಯನ್ನು ಅಶ್ವಿನ್ ಕೊನೆಗೂ ಬೇರ್ಪಡಿಸಿದರು.
ಸ್ವೀಪ್ ಹೊಡೆತವನ್ನು ಆಕರ್ಷಕವಾಗಿ ಆಡಿದ ರಹೀಂ ಒಂದು ತುದಿಯಲ್ಲಿ ವಿಕೆಟ್ ಬಿದ್ದಾಗಲೆಲ್ಲಾ ಎಚ್ಚರಿಕೆಯ ಆಟವಾಡುತ್ತಿದ್ದರು. ಕಳಪೆ ಬೌಲಿಂಗ್ ಮಾಡಿದ್ದ ಮೆಹದಿ ಹಸನ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ನಾಯಕನ ಜೊತೆ ಕೈಜೋಡಿಸಿದರು.
ಮೊದಲ 8 ಇನಿಂಗ್ಸ್‌ಗಳಲ್ಲಿ ಕೇವಲ 20 ರನ್ ಗಳಿಸಿರುವ ಮೆಹದಿ ವೇಗದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 19ರ ಹರೆಯದ ಮೆಹದಿ ಸ್ಪಿನ್ನರ್ ಅಶ್ವಿನ್ ಎಸೆತದಲ್ಲಿ ಬೌಂಡರಿ ಬಾರಿಸಿ ಗಮನಸೆಳೆದರು. 102 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ ಅರ್ಧಶತಕ ಪೂರೈಸಿದ ಮೆಹದಿ ಹಸನ್ ಭಾರತ ವಿರುದ್ಧ ಅರ್ಧಶತಕ ಬಾರಿಸಿದ ಬಾಂಗ್ಲಾದೇಶದ ಯುವ ಆಟಗಾರ ಎನಿಸಿಕೊಂಡರು.
ಭಾರತದ ಪರ ಉಮೇಶ್ ಯಾದವ್(2-72) ಯಶಸ್ವಿ ಬೌಲರ್ ಎನಿಸಿಕೊಂಡರು. ಇಶಾಂತ್ ಶರ್ಮ(1-54), ಅಶ್ವಿನ್(1-77) ಹಾಗೂ ಜಡೇಜ(1-60) ತಲಾ ಒಂದು ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ ಪ್ರಥಮ ಇನಿಂಗ್ಸ್: 687/6 ಡಿಕ್ಲೇರ್
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್: 104 ಓವರ್‌ಗಳಲ್ಲಿ 322/6
ತಮೀಮ್ ಇಕ್ಬಾಲ್ ರನೌಟ್ 24
ಸೌಮ್ಯ ಸರ್ಕಾರ್ ಸಿ ಸಹಾ ಬಿ ಯಾದವ್ 15
ಮೊಮಿನುಲ್ ಹಕ್ ಎಲ್‌ಬಿಡಬ್ಲು ಯಾದವ್ 12
ಮಹಮ್ಮುದುಲ್ಲಾ ಎಲ್‌ಬಿಡಬ್ಲು ಇಶಾಂತ್ ಶರ್ಮ 28
ಶಾಕಿಬ್ ಅಲ್ ಹಸನ್ ಸಿ ಯಾದವ್ ಬಿ ಅಶ್ವಿನ್ 82
ಮುಶ್ಫಿಕುರ್ರಹೀಂ ಅಜೇಯ 81
ಶಬ್ಬೀರ್ರಹ್ಮಾನ್ ಎಲ್‌ಬಿಡಬ್ಲು ಜಡೇಜ 16
ಮೆಹೆದಿ ಹಸನ್ ಅಜೇಯ 51
ಇತರ 13
ವಿಕೆಟ್ ಪತನ: 1-38, 2-44, 3-64, 4-109, 5-216, 6-235.
ಬೌಲಿಂಗ್ ವಿವರ:
ಭುವನೇಶ್ವರ ಕುಮಾರ್ 17-6-46-0
ಇಶಾಂತ್ ಶರ್ಮ 16-5-54-1
ಆರ್.ಅಶ್ವಿನ್ 24-6-77-1
ಉಮೇಶ್ ಯಾದವ್ 18-3-72-2
ರವೀಂದ್ರ ಜಡೇಜ 29-8-60-1.
ಅಂಕಿ-ಅಂಶ
02: ಬಾಂಗ್ಲಾದೇಶ ತಂಡ ಎರಡನೆ ಬಾರಿ ಭಾರತದ ವಿರುದ್ಧ ಟೆಸ್ಟ್ ಇನಿಂಗ್ಸ್‌ನಲ್ಲಿ 100ಕ್ಕೂ ಅಧಿಕ ಓವರ್ ಬೌಲಿಂಗ್ ಮಾಡಿದೆ. 2000ರಲ್ಲಿ ಢಾಕಾದಲ್ಲಿ ಭಾರತ ವಿರುದ್ಧ ಆಡಿರುವ ತನ್ನ ಮೊತ್ತ ಮೊದಲ ಟೆಸ್ಟ್ ಪಂದ್ಯದಲ್ಲಿ 153.3 ಓವರ್‌ಗಳಲ್ಲಿ 400ಕ್ಕೂ ಅಧಿಕ ರನ್ ಕಲೆ ಹಾಕಿತ್ತು.
04: ಬಾಂಗ್ಲಾದೇಶದ ನಾಲ್ವರು ಆಟಗಾರರು ಟೆಸ್ಟ್‌ನಲ್ಲಿ 3000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಆ ಸಾಲಿನಲ್ಲಿ ಮುಶ್ಫಿಕುರ್ರಹೀಂ(3003) ಹೊಸ ಸೇರ್ಪಡೆ. ತಮೀಮ್ ಇಕ್ಬಾಲ್ ಬಾಂಗ್ಲಾದ ಪರ ಗರಿಷ್ಠ ಟೆಸ್ಟ್ ಸ್ಕೋರ್(3467 ರನ್) ಗಳಿಸಿದ್ದಾರೆ.
67: ಮುಶ್ಫಿಕುರ್ರಹೀಂ ಭಾರತದ ವಿರುದ್ಧ 65ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮುಶ್ಫಿಕುರ್ರಹೀಂ 2010ರಲ್ಲಿ ಭಾರತದ ವಿರುದ್ಧವೇ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು.
34: ಶಾಕಿಬ್ ಅಲ್ ಹಸನ್ ಹೈದರಾಬಾದ್‌ನಲ್ಲಿ ಭಾರತ ವಿರುದ್ಧ 82 ರನ್ ಗಳಿಸುವ ಮೊದಲು 34 ರನ್ ಅವರು ಭಾರತ ವಿರುದ್ಧ ಗಳಿಸಿರುವ ಗರಿಷ್ಠ ಸ್ಕೋರಾಗಿತ್ತು.
466: ಶಾಕಿಬ್ ಹಾಗೂ ಮುಶ್ಫಿಕುರ್ರಹೀಂ ಈ ವರ್ಷ ನಡೆಸಿದ ಎರಡು ಜೊತೆಯಾಟದಲ್ಲಿ ಒಟ್ಟು 466 ರನ್ ಗಳಿಸಿದ್ದಾರೆ. ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 359 ರನ್ ಗಳಿಸಿರುವ ಶಾಕಿಬ್ ಭಾರತ ವಿರುದ್ಧ 107 ರನ್ ಸೇರಿಸಿದ್ದರು.