ಏಕೈಕ ಟೆಸ್ಟ್: ಬಾಂಗ್ಲಾದೇಶಕ್ಕೆ 459 ರನ್ ಗುರಿ
Update: 2017-02-12 16:40 IST
ಹೈದರಾಬಾದ್, ಫೆ.12: ಏಕೈಕ ಟೆಸ್ಟ್ ಪಂದ್ಯದ ನಾಲ್ಕನೆ ದಿನವಾದ ರವಿವಾರ ಲಂಚ್ ವಿರಾಮದ ಬಳಿಕ ಮಿಂಚಿನ ಬ್ಯಾಟಿಂಗ್ ನಡೆಸಿದ ಆತಿಥೇಯ ಭಾರತ ತಂಡ ಬಾಂಗ್ಲಾದೇಶದ ಗೆಲುವಿಗೆ 459 ರನ್ ಕಠಿಣ ಗುರಿ ನೀಡಿತು.
ದ್ವಿತೀಯ ಇನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ(ಅಜೇಯ 54) ವಿರಾಟ್ ಕೊಹ್ಲಿ (38)ಹಾಗೂ ಅಜಿಂಕ್ಯ ರಹಾನೆ ಉಪಯುಕ್ತ ಕಾಣಿಕೆ ನೀಡಿ ಭಾರತ 4 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿ ಬಾಂಗ್ಲಾಕ್ಕೆ ಕಠಿಣ ಗುರಿ ನೀಡಲು ನೆರವಾದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮುಂದುವರಿಸಿದ್ದ ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ 388 ರನ್‌ಗೆ ಆಲೌಟ್ ಮಾಡಿದ್ದ ಭಾರತ 299 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿತು.
ಬಾಂಗ್ಲಾದೇಶದ ನಾಯಕ ಮುಶ್ಫಿಕುರ್ರಹೀಂ(127) ವಿಕೆಟ್ ಕಬಳಿಸಿದ ಭಾರತದ ಪ್ರಮುಖ ಸ್ಪಿನ್ನರ್ ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 250 ವಿಕೆಟ್ ಪೂರೈಸಿದರು. ಅಶ್ವಿನ್ 45ನೆ ಟೆಸ್ಟ್ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರು.