ಆಸ್ಟ್ರೇಲಿಯ ದಂತಕತೆ ಡೆನ್ನಿಸ್ ಲಿಲ್ಲಿ ದಾಖಲೆ ಮುರಿದ ಅಶ್ವಿನ್
ಹೈದರಾಬಾದ್, ಫೆ.12: ಶ್ರೇಷ್ಠ ಫಾರ್ಮ್ ಮುಂದುವರಿಸಿದ ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಅತ್ಯಂತ ವೇಗವಾಗಿ 250 ವಿಕೆಟ್‌ಗಳನ್ನು ಪೂರೈಸಿ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. ಈ ಮೂಲಕ ಆಸ್ಟ್ರೇಲಿಯದ ಲೆಜಂಡ್ ಡೆನ್ನಿಸ್ ಲಿಲ್ಲಿ ದಾಖಲೆ ಮುರಿದರು.
ಕೇವಲ 45 ಟೆಸ್ಟ್ ಪಂದ್ಯಗಳಲ್ಲಿ 250 ವಿಕೆಟ್ ಮೈಲುಗಲ್ಲು ತಲುಪಿದ ಅಶ್ವಿನ್ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಲಿಲ್ಲಿ(48 ಪಂದ್ಯದಲ್ಲಿ 250 ವಿಕೆಟ್) ದಾಖಲೆಯನ್ನು ಮುರಿದರು. ಭಾರತದ ಪರ ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡರು. ಅನಿಲ್ ಕುಂಬ್ಳೆ 55 ಟೆಸ್ಟ್‌ಗಳಲ್ಲಿ ಸಾಧನೆಯನ್ನು ಸರಿಗಟ್ಟಿದರು.
ಚೆನ್ನೈ ಸ್ಪಿನ್ನರ್ ಅಶ್ವಿನ್ ಕಳೆದ ವರ್ಷ 12 ಟೆಸ್ಟ್ ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಕಬಳಿಸಿದ್ದರು. ಸತತ ಎರಡನೆ ವರ್ಷ ಗರಿಷ್ಠ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದರು.
ಏಕೈಕ ಟೆಸ್ಟ್ ಪಂದ್ಯದ ನಾಲ್ಕನೆ ದಿನವಾದ ರವಿವಾರ ಬೆಳಗ್ಗೆ ಬಾಂಗ್ಲಾದೇಶದ ನಾಯಕ ಮುಶ್ಫಿಕುರ್ರಹೀಂ(127) ವಿಕೆಟ್ ಕಬಳಿಸಿದ ಅಶ್ವಿನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 250 ವಿಕೆಟ್ ಪೂರೈಸಿದ ಸಾಧನೆ ಮಾಡಿದರು.
ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಪಾಕಿಸ್ತಾನದ ಶ್ರೇಷ್ಠ ಬೌಲರ್ ವಕಾರ್ ಯೂನಿಸ್ ಹಾಗೂ ಲಿಲ್ಲಿ ಸಾಧನೆಯನ್ನು ಹಿಂದಿಕ್ಕಿದ ಅಶ್ವಿನ್ ವೇಗವಾಗಿ 200 ಟೆಸ್ಟ್ ವಿಕೆಟ್ ಪಡೆದ ವಿಶ್ವದ ಎರಡನೆ ಬೌಲರ್ ಎನಿಸಿಕೊಂಡಿದ್ದರು. ಅಶ್ವಿನ್ 37ನೆ ಟೆಸ್ಟ್‌ನಲ್ಲಿ 200 ವಿಕೆಟ್ ಪೂರೈಸಿದರೆ, ವಕಾರ್ ಹಾಗೂ ಲಿಲ್ಲಿ ಕ್ರಮವಾಗಿ 38ನೆ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
ಆಸ್ಟ್ರೇಲಿಯದ ಮಾಜಿ ಲೆಗ್-ಸ್ಪಿನ್ನರ್ ಕ್ಲಾರ್ರೀ ಗ್ರಿಮ್ಮೆಟ್ ಅತ್ಯಂತ ವೇಗವಾಗಿ (ಕೇವಲ 36 ಟೆಸ್ಟ್ )200ನೆ ವಿಕೆಟ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಅಶ್ವಿನ್ ಬೌಲಿಂಗ್ ಮಾತ್ರವಲ್ಲ ಬ್ಯಾಟಿಂಗ್‌ನಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. 2016ರಲ್ಲಿ 14 ಇನಿಂಗ್ಸ್‌ಗಳಲ್ಲಿ 43.71ರ ಸರಾಸರಿಯಲ್ಲಿ 612 ರನ್ ಗಳಿಸಿದ್ದು, ಇದರಲ್ಲಿ 2 ಶತಕ ಹಾಗೂ 4 ಅರ್ಧಶತಕಗಳಿವೆ.
ವೇಗವಾಗಿ 250 ವಿಕೆಟ್ ಮೈಲುಗಲ್ಲು ತಲುಪಿದ ಸಾಧಕರು
ಆಟಗಾರ ಟೆಸ್ಟ್ ಎದುರಾಳಿ ಸ್ಥಳ ವಿಕೆಟ್
ಆರ್.ಅಶ್ವಿನ್ 45 ಬಾಂಗ್ಲಾ ಹೈದರಾಬಾದ್ 252
ಡಿ.ಲಿಲ್ಲಿ 48 ಭಾರತ ಮೆಲ್ಬೋರ್ನ್ 355
ಡಿ.ಸ್ಟೆಯ್ನೆ 49 ಶ್ರೀಲಂಕಾ ಸೆಂಚೂರಿಯನ್ 417
ಡೊನಾಲ್ಡ್ 50 ವಿಂಡೀಸ್ ಡರ್ಬನ್ 330
ಯೂನಿಸ್ 51 ದ.ಆಫ್ರಿಕ ಪೊರ್ಟ್‌ಎಲಿಜಬೆತ್ 373
ಮುರಳೀಧರನ್ 51 ಪಾಕ್ ಕರಾಚಿ 800