ನಾಯಕತ್ವದಲ್ಲಿ ಕೊಹ್ಲಿ ಹೊಸ ದಾಖಲೆ
ಹೈದರಾಬಾದ್,ಫೆ.13: ಬಾಂಗ್ಲಾದೇಶ ವಿರುದ್ಧ ಸೋಮವಾರ ಇಲ್ಲಿ ಕೊನೆಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ ಮತ್ತೊಂದು ಸರಣಿಯನ್ನು ಜಯಿಸಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಸತತ 19ನೆ ಪಂದ್ಯವನ್ನು ಗೆದ್ದುಕೊಂಡಿದೆ. ಕೊಹ್ಲಿ ಭಾರತದ ಯಶಸ್ವಿ ಟೆಸ್ಟ್ ನಾಯಕನಾಗಿ ಹೊರ ಹೊಮ್ಮಿದ್ದಾರೆ.
ಕೊಹ್ಲಿ ಈ ಸಾಧನೆಯ ಮೂಲಕ ಮಾಜಿ ನಾಯಕ ಸುನಿಲ್ ಗವಾಸ್ಕರ್(18 ಪಂದ್ಯಗಳು) ದಾಖಲೆಯನ್ನು ಮುರಿದಿದ್ದಾರೆ. ಗವಾಸ್ಕರ್ 1976 ಜನವರಿ ಹಾಗೂ 1980ರ ಜನವರಿಯ ನಡುವೆ ಸತತ 18 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಭಾರತ ಕೊಹ್ಲಿ ನಾಯಕತ್ವದಲ್ಲಿ 2015ರ ಆಗಸ್ಟ್‌ನಲ್ಲಿ ಶ್ರೀಲಂಕಾದ ವಿರುದ್ಧ ಗಾಲೆಯಲ್ಲಿ ಕೊನೆಯ ಬಾರಿ ಸೋತಿತ್ತು. ಆ ನಂತರ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.
ಸತತ ಆರನೆ ಸರಣಿಯನ್ನು ಜಯಿಸಿದ ಭಾರತ ತನ್ನ ಹಿಂದಿನ ಸತತ 5 ಟೆಸ್ಟ್ ಸರಣಿ ಗೆಲುವಿನ ದಾಖಲೆಯನ್ನು ಉತ್ತಮಪಡಿಸಿಕೊಂಡಿತು.
ಕೊಹ್ಲಿ ಹೊರತುಪಡಿಸಿ ಕೇವಲ ಇಬ್ಬರು ನಾಯಕರು ದೀರ್ಘಕಾಲ ಅಜೇಯ ದಾಖಲೆ ಕಾಯ್ದುಕೊಂಡಿದ್ದರು. ವಿಂಡೀಸ್‌ನ ಕ್ಲೈವ್‌ಲಾಯ್ಡಿ 1982ರ ಜನವರಿ ಹಾಗೂ 1984ರ ಡಿಸೆಂಬರ್‌ನ ನಡುವೆ ಸತತ 26 ಟೆಸ್ಟ್‌ಗಳಲ್ಲಿ ಅಜೇಯವಾಗುಳಿದಿದ್ದರು. ಆಸೀಸ್‌ನ ರಿಕಿ ಪಾಂಟಿಂಗ್ 2005ರ ಸೆಪ್ಟಂಬರ್‌ನಿಂದ 2007ರ ಡಿಸೆಂಬರ್‌ನ ತನಕ ಸತತ 22 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ರಿಚರ್ಡ್ ಎಲ್ಲಿಂಗ್‌ವರ್ತ್ 20ನೆ ಟೆಸ್ಟ್ ತನಕ ಸೋಲಿನ ಕಹಿಯನ್ನೇ ಕಂಡಿರಲಿಲ್ಲ.
ಇದೇ ವೇಳೆ ಭಾರತ ಸ್ವದೇಶದಲ್ಲಿ 20ನೆ ಗೆಲುವು ಸಾಧಿಸಿತು. 2012ರ ಡಿಸೆಂಬರ್‌ನಿಂದ ಇಂದಿನ ತನಕ 17ರಲ್ಲಿ ಜಯ ಹಾಗೂ 3ರಲ್ಲಿ ಡ್ರಾ ಸಾಧಿಸಿದೆ. 2012ರಲ್ಲಿ ಕೋಲ್ಕತಾದಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಬಾರಿ ಸ್ವದೇಶದಲ್ಲಿ ಸೋಲುಂಡಿತ್ತು.