×
Ad

ನಾಡಾ ಶಿಸ್ತು ಸಮಿತಿಯಿಂದ ಇಂದ್ರಜಿತ್ ಭವಿಷ್ಯ ನಿರ್ಧಾರ

Update: 2017-02-13 23:35 IST

ಹೊಸದಿಲ್ಲಿ, ಫೆ.13: ಕಳೆದ ವರ್ಷ ಜುಲೈನಲ್ಲಿ ಡೋಪಿಂಗ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಶಾಟ್‌ಪುಟ್ ಪಟು ಇಂದ್ರಜಿತ್ ಸಿಂಗ್‌ರ ಭವಿಷ್ಯವನ್ನು ಡೋಪಿಂಗ್ ವಿರೋಧಿ ಶಿಸ್ತು ಸಮಿತಿ ನಿರ್ಧರಿಸಲಿದೆ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಸೋಮವಾರ ಸ್ಪಷ್ಟಪಡಿಸಿದೆ.

ಜೂ.22 ರಂದು ಸಿಂಗ್‌ರಿಂದ ಪಡೆದಿದ್ದ ಮೂತ್ರ ಮಾದರಿಯಲ್ಲಿ ಉದ್ದೀಪನಾ ಮದ್ದು ಸೇವಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಂಗ್‌ಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿತ್ತು.

ಸರಕಾರಿ ಸ್ವಾಮ್ಯದ ಲ್ಯಾಬೊರೇಟರಿ ಮೇಲೆ ವಿಶ್ವಾಸವನ್ನು ಕಳೆದುಕೊಂಡಿರುವ ಸಿಂಗ್ ತನ್ನ ಬಿ ಮಾದರಿಯನ್ನು ವಿದೇಶದಲ್ಲಿ ನಡೆಸುವಂತೆ ನಾಡಾ ಬಳಿ ವಿನಂತಿಸಿದ್ದಾರೆ.

 2015ರ ಏಷ್ಯನ್ ಚಾಂಪಿಯನ್ ಸಿಂಗ್ ಕೋರಿಕೆಯನ್ನು ನಿರಾಕರಿಸಿರುವ ನಾಡಾ ಇತ್ತೀಚೆಗೆ ಸ್ವತಂತ್ರ ವೀಕ್ಷಕರ ಸಮ್ಮುಖದಲ್ಲಿ ಬಿ ಮಾದರಿಯ ಪರೀಕ್ಷೆ ನಡೆಸಿದ್ದು, ಈ ಪರೀಕ್ಷೆಯಲ್ಲೂ ಸಿಂಗ್ ವಿಫಲರಾಗಿದ್ದರು.

ನಾಡಾದ ಉದ್ದೀಪನಾ ದ್ರವ್ಯ ವಿರೋಧಿ ನೀತಿಸಂಹಿತೆ ಉಲ್ಲಂಘಿಸಿರುವುದು ಸಾಬೀತಾಗಿದ್ದು, ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಅವಕಾಶವನ್ನು ಸಿಂಗ್‌ಗೆ ಕಲ್ಪಿಸಲಾಗುತ್ತಿದ್ದು, ವಿಚಾರಣೆಯ ದಿನಾಂಕ ಹಾಗೂ ಸಮಯವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ನಾಡಾ ತಿಳಿಸಿದೆ.

ಡೋಪಿಂಗ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ತಾತ್ಕಾಲಿಕವಾಗಿ ಅಮಾನತಿನಲ್ಲಿರುವ ಮಂಗೇಶ್ ಭಗತ್(ಕಬಡ್ಡಿ), ಜಗ್‌ಶೀರ್ ಸಿಂಗ್(ಪ್ಯಾರಾ ಲಾಂಗ್‌ಜಂಪ್) ಹಾಗೂ ಮಹೇಶ್ ಕಾಳೆ(ಅಥ್ಲೆಟಿಕ್ಸ್) ವಿರುದ್ಧ ಪ್ರಕರಣವನ್ನು ಡೋಪಿಂಗ್ ವಿರೋಧಿ ಶಿಸ್ತು ಸಮಿತಿಯ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News