ತಲೆಗೆ ಬ್ಯಾಟಿನ ಪೆಟ್ಟು: ಆಸ್ಟ್ರೇಲಿಯದ ವಿಕೆಟ್‌ಕೀಪರ್ ಆಸ್ಪತ್ರೆಗೆ
ಅಡಿಲೇಡ್, ಫೆ.14: ಆಸ್ಟ್ರೇಲಿಯದ ದೇಶೀಯ ಕ್ರಿಕೆಟ್ ಟೂರ್ನಿ ಶೀಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ವಿಕೆಟ್‌ಕೀಪಿಂಗ್ ನಿರತರಾಗಿದ್ದ ವಿಕ್ಟೋರಿಯ ರಾಜ್ಯ ತಂಡದ ವಿಕೆಟ್‌ಕೀಪರ್ ಸ್ಯಾಮ್ ಹಾರ್ಪರ್ ತಲೆಗೆ ಬ್ಯಾಟ್‌ನ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.
20ರ ಪ್ರಾಯದ ಹಾರ್ಪರ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಅಡಿಲೇಡ್‌ನ ಆಸ್ಪತ್ರೆಯಲ್ಲಿ ಇನ್ನಷ್ಟು ದಿನ ಉಳಿದುಕೊಳ್ಳಲಿರುವ ಹಾರ್ಪರ್‌ಗೆ ನಿರಂತರವಾಗಿ ಚಿಕಿತ್ಸೆ ನೀಡುವ ಅಗತ್ಯವಿದ್ದು, ಸ್ಪೆಷಲಿಸ್ಟ್‌ಗಳು ಅವರ ಆರೋಗ್ಯವನ್ನು ಪರೀಕ್ಷಿಸುತ್ತಿದ್ದಾರೆ ಎಂದು ಕ್ರಿಕೆಟ್ ವಿಕ್ಟೋರಿಯ ದೃಢಪಡಿಸಿದೆ.
ಅವರು ಸಂಪೂರ್ಣ ಚೇತರಿಸಿಕೊಂಡು, ಯಾವಾಗ ಮನೆಗೆ ತೆರಳಿದ್ದಾರೆಂಬ ಸ್ಪಷ್ಟ ಚಿತ್ರಣ ಈ ವಾರಾಂತ್ಯದಲ್ಲಿ ಗೊತ್ತಾಗುವ ನಿರೀಕ್ಷೆಯಿದೆ ಎಂದು ಕ್ರಿಕೆಟ್ ವಿಕ್ಟೋರಿಯ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಶೀಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಸ್ಪಿನ್ನರ್ ಜಾನ್ ಹಾಲೆಂಡ್ ಬೌಲಿಂಗ್‌ನಲ್ಲಿ ವೆಸ್ಟ್ ಎಂಡ್ ರೆಡ್‌ಬ್ಯಾಕ್ಸ್ ತಂಡದ ಬ್ಯಾಟ್ಸ್‌ಮನ್ ಜಾಕ್ ಲೆಹ್ಮಾನ್ ಶಾರ್ಟ್ ಬಾಲ್‌ನ್ನು ಲೆಗ್ ಲೈಡ್‌ಗೆ ವೈಪ್ ಮಾಡಲು ಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಬ್ಯಾಟ್ ಕೀಪಿಂಗ್ ನಡೆಸುತ್ತಿದ್ದ ಹಾರ್ಪರ್ ತಲೆಗೆ ತಗಲಿದೆ. ಆ ಸಮಯದಲ್ಲಿ ಕೀಪರ್ ಹೆಲ್ಮೆಟ್ ಧರಿಸಿದ್ದರು. ಮೈದಾನದಲ್ಲಿ ಕುಸಿದು ಬಿದ್ದ ಹಾರ್ಪರ್‌ಗೆ ಆಟಗಾರರು ಹಾಗೂ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ನೆರವಿಗೆ ಧಾವಿಸಿದರು.
ಈ ಋತುವಿನಲ್ಲಿ ಎರಡನೆ ಬಾರಿ ವಿಕೆಟ್‌ಕೀಪರ್ ಬ್ಯಾಟ್‌ನಿಂದ ಪೆಟ್ಟು ತಿಂದ ಘಟನೆ ನಡೆದಿದೆ. ಇತ್ತೀಚೆಗೆ ಕೆಎಫ್‌ಸಿ ಬಿಗ್ ಬಾಶ್ ಟ್ವೆಂಟಿ-20 ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗಡೆಸ್ ತಂಡದ ವಿಕೆಟ್‌ಕೀಪರ್ ಪೀಟರ್ ನೆವಿಲ್‌ಗೆ ಬ್ಯಾಟ್‌ನ ಪೆಟ್ಟು ಬಿದ್ದಾಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.