×
Ad

ಅಶ್ವಿನ್ ಈಗ ‘ಬೌಲಿಂಗ್‌ನ ಬ್ರಾಡ್ಮನ್’: ಸ್ಟೀವ್ ವಾ

Update: 2017-02-14 23:48 IST

 ಮೊನಾಕೊ, ಫೆ.14: ‘‘ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಈ ಕ್ಷಣದಲ್ಲಿ ಬೌಲಿಂಗ್‌ನ ಬ್ರಾಡ್ಮನ್‌ನಂತಿದ್ದಾರೆ. ಅಶ್ವಿನ್ ಬೌಲಿಂಗ್‌ನಲ್ಲಿ ಮಾಡಿರುವ ಸಾಧನೆ ಬ್ರಾಡ್ಮನ್ ಅವರು ಬ್ಯಾಟಿಂಗ್‌ನಲ್ಲಿ ಮಾಡಿರುವ ಸಾಧನೆಗೆ ಸಮನಾಗಿದೆ. ಅಶ್ವಿನ್ ಉತ್ತಮ ಬೌಲರ್ ಮಾತ್ರವಲ್ಲ ಬ್ಯಾಟ್ಸ್‌ಮನ್ ಕೂಡ ಹೌದು’’ ಎಂದು ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ವಾ ಶ್ಲಾಘಿಸಿದ್ದಾರೆ.

ತಮಿಳುನಾಡು ಸ್ಪಿನ್ನರ್ ಅಶ್ವಿನ್ ಟೆಸ್ಟ್‌ನಲ್ಲಿ ಅತ್ಯಂತ ವೇಗವಾಗಿ 250 ವಿಕೆಟ್ ಪೂರೈಸಿದ್ದು, ಬಾಂಗ್ಲಾದೇಶ ವಿರುದ್ಧದ ಏಕೈಕ ಪಂದ್ಯದಲ್ಲಿ ಅವರು ಈ ಮೈಲುಗಲ್ಲು ತಲುಪಿದ್ದರು. ಅಶ್ವಿನ್ ನೇತೃತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಉಲ್ಲೇಖಿಸಿದ ಸ್ಟೀವ್ ಮೇಲಿನಂತೆ ಅಭಿಪ್ರಾಯಪಟ್ಟಿದ್ದಾರೆ.

ನಾವು ಸಕಾರಾತ್ಮಕ ಚಿಂತನೆಯೊಂದಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಬೇಕು. ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದ್ದರೆ ಆ ಬಳಿಕ ಎಲ್ಲವೂ ಬದಲಾಗುತ್ತಿತ್ತು. ಗಾಳಿ ನಮ್ಮ ವಿರುದ್ಧ ಬೀಸಲಾರಂಭಿಸಿದರೆ ಏನೂ ಮಾಡಲು ಸಾಧ್ಯವಾಗದು. ಒತ್ತಡದಲ್ಲಿ ಶಾಂತವಾಗಿರಬೇಕು ಎಂದು 51ಕ್ಕೂ ಅಧಿಕ ಸರಾಸರಿಯಲ್ಲಿ 10,927 ರನ್ ಗಳಿಸಿರುವ ಸ್ಟೀವ್‌ವಾ ಹೇಳಿದ್ದಾರೆ.

ಆಸ್ಟ್ರೇಲಿಯ ತಂಡ ಭಾರತೀಯ ಪ್ರವಾಸಕ್ಕೆ ತಯರಿ ನಡೆಸುತ್ತಿರುವ ನಡುವೆ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಆಸೀಸ್ ಪಾಳಯಕ್ಕೆ ಮಾತಿನ ಗ್ರೆನೆಡ್ ಎಸೆದಿದ್ದಾರೆ. ಆಸ್ಟ್ರೇಲಿಯ ಈ ಬಾರಿ ಭಾರತದ ವಿರುದ್ಧ 0-4 ರಿಂದ ಸೋಲಲಿದೆ ಎಂದು ಗಂಗುಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಂಗುಲಿ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಟೀವ್‌ವಾ,‘‘ಈ ರೀತಿ ಅಭಿಪ್ರಾಯಪಡುವುದು ಮೂರ್ಖತನವಾಗುತ್ತದೆ. ಭಾರತದ ಹೆಚ್ಚಿನ ಆಟಗಾರರು ನಮ್ಮ ಆಟಗಾರರನ್ನು ನೋಡಿಲ್ಲ. ನನ್ನ ಪ್ರಕಾರ (ಮಿಚೆಲ್) ಸ್ಟಾರ್ಕ್ ವಿಶ್ವಶ್ರೇಷ್ಠ ವೇಗದ ಬೌಲರ್ ಆಗಿದ್ದಾರೆ.(ಜೋಶ್)ಹೇಝಲ್‌ವುಡ್ ಉತ್ತಮ ಬೌಲಿಂಗ್ ಮಾಡಬಲ್ಲರು. ಸ್ಪಿನ್ನರ್‌ಗಳ ಪೈಕಿ ಲಿಯೊನ್ ಉತ್ತಮ ಸ್ಪರ್ಧಿಯಾಗಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News