ಉಸೇನ್ ಬೋಲ್ಟ್‌ಗೆ ಲಾರೆಸ್ ‘ವರ್ಷದ ಕ್ರೀಡಾಪಟು ಪ್ರಶಸ್ತಿ’
*ನಾಲ್ಕನೆ ಬಾರಿ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಜಯಿಸಿದ ಬೋಲ್ಟ್ ,ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ಸಾಧನೆ ಸರಿಗಟ್ಟಿದರು.
*ರಿಯೋ ಗೇಮ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಅಮೆರಿಕದ ಜಿಮ್ನಾಸ್ಟಿಕ್ ತಾರೆ ಸಿಮೊನಾ ಬಿಲ್ಸ್‌ಗೆ ಲಾರೆಸ್ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿ
*ಲೆಸೆಸ್ಟರ್ ಸಿಟಿ ಮ್ಯಾನೇಜರ್ ಕ್ಲೌಡಿಯೊ ರಾನಿಯೆರಿಗೆ ‘ಸ್ಪಿರಿಟ್ ಆಫ್ ಸ್ಪೋರ್ಟ್ಸ್’ ಪ್ರಶಸ್ತಿ
*ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ನಿಕೊ ರಾಸ್‌ಬರ್ಗ್‌ಗೆ ಲಾರೆಸ್ ‘ವರ್ಲ್ಡ್ ಬ್ರೇಕ್‌ಥ್ರೂ’ ಪ್ರಶಸ್ತಿ
*‘ಚಿನ್ನದ ಮೀನು’ ಖ್ಯಾತಿಯ ಮೈಕಲ್ ಫೆಲ್ಪ್ಸ್‌ಗೆ ಲಾರೆಸ್ ವರ್ಷದ ವರ್ಲ್ಡ್ ಕಮ್‌ಬ್ಯಾಕ್ ಪ್ರಶಸ್ತಿ.
ಮೊನಾಕೊ, ಫೆ.15: ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಅವರು ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲೆಬ್ರಾನ್ ಜೇಮ್ಸ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ನಾಲ್ಕನೆ ಬಾರಿ ಪ್ರತಿಷ್ಠಿತ ಲಾರೆಸ್ ‘ವರ್ಷದ ಕ್ರೀಡಾಪಟು ಪ್ರಶಸ್ತಿ’ಯನ್ನು ಬಾಚಿಕೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ.
ಅಮೆರಿಕದ ಜಿಮ್ನಾಸ್ಟಿಕ್ ತಾರೆ ಸಿಮೊನಾ ಬಿಲ್ಸ್ ಮಹಿಳೆಯರ ವಿಭಾಗದಲ್ಲಿ ವರ್ಷದ ಕ್ರೀಡಾಪಟು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ವರ್ಣರಂಜಿತ ಸಮಾರಂಭದಲ್ಲಿ ಪ್ರತಿಷ್ಠಿತ ಲಾರೆಸ್ ವಿಶ್ವ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ಬೋಲ್ಟ್ ಹಾಗೂ ಸಿಮೊನಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಅಥ್ಲೆಟಿಕ್ಸ್ ಹಾಗೂ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 17 ವರ್ಷಗಳ ಹಿಂದೆ ಲಾರೆಸ್ ಪ್ರಶಸ್ತಿ ಜನ್ಮತಾಳಿದ ಸ್ಥಳದಲ್ಲೇ ಬೋಲ್ಟ್ ಹಾಗೂ ಸಿಮೊನಾ ಪ್ರಶಸ್ತಿ ಸ್ವೀಕರಿಸಿದರು.
‘ಕ್ರೀಡೆಯ ಆಸ್ಕರ್’ ಎಂದೇ ಪರಿಗಣಿಸಲ್ಪಟ್ಟಿರುವ ಲಾರೆಸ್ ಪ್ರಶಸ್ತಿಯನ್ನು ಬೋಲ್ಟ್ ನಾಲ್ಕನೆ ಬಾರಿ ಸ್ವೀಕರಿಸಿದರು. ಈ ಹಿಂದೆ ಅವರು 2009, 2010 ಹಾಗೂ 2013ರಲ್ಲಿ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಭಾಜನರಾಗಿದ್ದರು. ನಾಲ್ಕನೆ ಬಾರಿ ಲಾರೆಸ್ ಪ್ರಶಸ್ತಿಯನ್ನು ಸ್ವೀಕರಿಸಿದ ಬೋಲ್ಟ್ ಅವರು ಟೆನಿಸ್ ಲೆಜಂಡ್‌ಗಳಾದ ರೋಜರ್ ಫೆಡರರ್ ಹಾಗೂ ಸೆರೆನಾ ವಿಲಿಯಮ್ಸ್, ಸರ್ಫರ್ ಕೆಲ್ಲಿ ಸ್ಲೇಟರ್ ದಾಖಲೆಯನ್ನು ಸರಿಗಟ್ಟಿದರು. ಈ ಮೂವರು ನಾಲ್ಕು ಬಾರಿ ಲಾರೆಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಲೆಜಂಡರಿ ಮೈಕಲ್ ಜಾನ್ಸನ್‌ರಿಂದ ಬೋಲ್ಟ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ನೀಡಿದ ಜಾನ್ಸನ್, ನೀವು ಬೇರೆಯವರ ದಾಖಲೆಯನ್ನು ಮುರಿಯಬೇಡಿ ಎಂದು ಬೋಲ್ಟ್‌ಗೆ ಮನವಿ ಮಾಡಿದರು. ನಾನು ನಿಮ್ಮ ದಾಖಲೆಯನ್ನು ಮುರಿದಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ಬೋಲ್ಟ್ ಉತ್ತರಿಸಿದರು.
‘‘ಅದ್ಭುತ ಪ್ರಶಸ್ತಿಗೆ ಕೃತಜ್ಞತೆಗಳು. ನನ್ನ ಪಾಲಿಗೆ ಲಾರೆಸ್ ಒಂದು ಅತಿದೊಡ್ಡ ಪ್ರಶಸ್ತಿಯಾಗಿದೆ. ಇದು ನನಗೆ ಲಭಿಸಿದ ನಾಲ್ಕನೆ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯೊಂದಿಗೆ ರೋಜರ್ ಫೆಡರರ್‌ರಂತಹ ಶ್ರೇಷ್ಠ ಆಟಗಾರರ ದಾಖಲೆ ಸರಿಗಟ್ಟಿದ್ದೇನೆ. ಇದೊಂದು ವಿಶೇಷ ಕ್ಷಣವಾಗಿದೆ’’ ಎಂದು ಬೋಲ್ಟ್ ಪ್ರತಿಕ್ರಿಯಿಸಿದರು.
ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಚಾಂಪಿಯನ್ ಸಿಮೊನಾ ಬಿಲ್ಸ್ ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿ ಸ್ವೀಕರಿಸಿದರು. ಸಿಮೊನಾ ರಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದರು.
ಸಾರ್ವಕಾಲಿಕ ಶ್ರೇಷ್ಠ ಒಲಿಂಪಿಯನ್,ಚಿನ್ನದ ಮೀನು ಖ್ಯಾತಿಯ ಅಮೆರಿಕದ ಈಜುಪಟು ಮೈಕಲ್ ಫೆಲ್ಪ್ಸ್ ‘ಕಮ್‌ಬ್ಯಾಕ್ ಆಫ್ ದಿ ಇಯರ್’ ಅವಾರ್ಡ್ ಪಡೆದರು. ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದು ರಿಯೋ ಒಲಿಂಪಿಕ್ಸ್‌ನಲ್ಲಿ 5 ಚಿನ್ನ, 1 ಬೆಳ್ಳಿ ಪದಕವನ್ನು ಜಯಿಸಿದ್ದ ಫೆಲ್ಪ್ಸ್ ವಿಶ್ವದ ಗಮನ ಸೆಳೆದಿದ್ದರು. ಫೆಲ್ಪ್ಸ್ 2012ರ ಒಲಿಂಪಿಕ್ಸ್‌ನ ಬಳಿಕ ನಿವೃತ್ತಿ ಘೋಷಿಸಿದ್ದರು. ಆದರೆ, ಕಳೆದ ವರ್ಷ ಅವರು ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದರು. ಫಾರ್ಮುಲಾ ಒನ್ ಚಾಂಪಿಯನ್ ನಿಕೊ ರಾಸ್‌ಬರ್ಗ್ ಅವರು ‘ಬ್ರೇಕ್‌ತ್ರೂ ಆಫ್ ದಿ ಇಯನ್’ ಪ್ರಶಸ್ತಿ ಸ್ವೀಕರಿಸಿದರು. 2014 ಹಾಗೂ 2015ರಲ್ಲಿ ರನ್ನರ್-ಅಪ್ ಆಗಿದ್ದ ಅವರು ಕಳೆದ ವರ್ಷ ಚಾಂಪಿಯನ್ ಆಗಿದ್ದರು.
108 ವರ್ಷಗಳ ಬಳಿಕ ಮೊದಲ ಬಾರಿ ಪ್ರಮುಖ ಲೀಗ್ ಬೇಸ್‌ಬಾಲ್ ವರ್ಲ್ಡ್ ಸರಣಿಯನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಚಿಕಾಗೊ ಕ್ಲಬ್ ಲಾರೆಸ್ ಟೀಮ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡಮಿಯ ಸದಸ್ಯರುಗಳು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ.