×
Ad

ಗುಜರಾತ್ ಲಯನ್ಸ್‌ಗೆ ಕೈಫ್ ಕೋಚ್ ?

Update: 2017-02-15 18:14 IST

ಹೊಸದಿಲ್ಲಿ, ಫೆ.15: ಮುಂಬರುವ ಎ.5 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಗುಜರಾತ್ ಲಯನ್ಸ್ ತಂಡದ ಕೋಚ್ ಆಗಿ ಭಾರತದ ಮಾಜಿ ಬ್ಯಾಟ್ಸ್‌ಮನ್ ಮುಹಮ್ಮದ್ ಕೈಫ್ ಆಯ್ಕೆಯಾಗುವ ಸಾಧ್ಯತೆಯಿದೆ.

2002ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್‌ನ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದ ಕೈಫ್ ಗುಜರಾತ್ ಲಯನ್ಸ್‌ನ ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತುಕತೆ ನಿರತರಾಗಿದ್ದಾರೆ. ಬುಧವಾರ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಅಕ್ರಮ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಕಾರಣ ಐಪಿಎಲ್‌ನಿಂದ 2 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದವು. ಈ ಎರಡು ತಂಡಗಳು ನಿಷೇಧಕ್ಕೊಳಪಟ್ಟ ಕಾರಣ ರಾಜ್‌ಕೋಟ್ ಮೂಲದ ಗುಜರಾತ್ ಲಯನ್ಸ್ ತಂಡ ತಾತ್ಕಾಲಿಕ ನೆಲೆಯಲ್ಲಿ ಐಪಿಎಲ್ ಆಡುವ ಅವಕಾಶ ಪಡೆದಿತ್ತು.

ಸುರೇಶ್ ರೈನಾ ನಾಯಕತ್ವದ ಲಯನ್ಸ್ ತಂಡದಲ್ಲಿ ಬ್ರೆಂಡನ್ ಮೆಕಲಮ್, ಆ್ಯರೊನ್ ಫಿಂಚ್, ಜೇಮ್ಸ್ ಫಾಕ್ನರ್ ಹಾಗೂ ರವೀಂದ್ರ ಜಡೇಜ ಸಹಿತ ಹಲವು ಪ್ರಮುಖ ಆಟಗಾರರಿದ್ದಾರೆ. 2016ರ ಆವೃತ್ತಿಯ ಐಪಿಎಲ್‌ನಲ್ಲಿ ಲಯನ್ಸ್ 14 ಪಂದ್ಯಗಳ ಪೈಕಿ 9ರಲ್ಲಿ ಜಯ ಸಾಧಿಸಿ ಒಟ್ಟು 18 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಆದರೆ, ಪ್ಲೇ-ಆಫ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎರಡೂ ಪಂದ್ಯಗಳನ್ನು ಸೋತ ಕಾರಣ ಫೈನಲ್‌ಗೆ ತಲುಪುವ ಅವಕಾಶದಿಂದ ವಂಚಿತವಾಗಿತ್ತು.

ಕೇಶವ್ ಬನ್ಸಾಲ್ ಮಾಲಕತ್ವದ ತಂಡಕ್ಕೆ ಕಳೆದ ಋತುವಿನಲ್ಲಿ ಆಸ್ಟ್ರೇಲಿಯದ ಬ್ರಾಡ್ ಹಾಡ್ಜ್ ಕೋಚ್ ನೀಡಿದ್ದರು. ಈ ಬಾರಿ ಕೈಫ್ ಅವರು ಬ್ರಾಡ್ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ.

36ರ ಪ್ರಾಯದ ಕೈಫ್ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ ರಾಯಲ್ಸ್ ಹಾಗೂ ಆರ್‌ಸಿಬಿ ಪರ ಆಡಿದ್ದರು. 2008ರ ಚಾಂಪಿಯನ್ ರಾಜಸ್ಥಾನ ತಂಡದಲ್ಲಿ ಆಡಿದ್ದ ಕೈಫ್ ಬ್ಯಾಟಿಂಗ್‌ನಲ್ಲಿ ಕೇವಲ 176 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News