×
Ad

ಪ್ರಶಸ್ತಿ ಗೆಲುವಿನತ್ತ ಪೂರ್ವ ವಲಯ ಚಿತ್ತ

Update: 2017-02-16 23:29 IST

ಮುಂಬೈ, ಫೆ.16: ಹರ್ಭಜನ್ ಸಿಂಗ್ ನಾಯಕತ್ವದ ಉತ್ತರ ವಲಯ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ ಮನೋಜ್ ತಿವಾರಿ ನೇತೃತ್ವದ ಪೂರ್ವ ವಲಯ ಅಂತರ್-ವಲಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ. ಈ ಮೂಲಕ ಪ್ರಶಸ್ತಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಪೂರ್ವ ವಲಯ ತಂಡ ಒಟ್ಟು 12 ಅಂಕವನ್ನು ಬಾಚಿಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಪ್ರತಿಸ್ಪರ್ಧಿ ಕೇಂದ್ರ ವಲಯಗಿಂತ 4 ಅಂಕ ಮುನ್ನಡೆಯಲ್ಲಿದೆ.

160 ರನ್ ಗುರಿ ಪಡೆದಿದ್ದ ಪೂರ್ವ ವಲಯ ತಂಡ ವಿರಾಟ್ ಸಿಂಗ್(ಅಜೇಯ 74 ರನ್, 48 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಮನೋಜ್ ತಿವಾರಿ(ಅಜೇಯ 75 ರನ್, 43 ಎಸೆತ, 5 ಬೌಂಡರಿ, 5 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್‌ನ ಸಹಾಯದಿಂದ 16.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಒಂದು ಹಂತದಲ್ಲಿ 13 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಪೂರ್ವ ವಲಯ ಸೋಲಿನ ಭೀತಿಯಲ್ಲಿತ್ತು. ಫಾರ್ಮ್‌ನಲ್ಲಿದ್ದ ಇಶಾಂಕ್ ಜಗ್ಗಿ(7) ಬೇಗನೆ ಔಟಾದರು. ಶ್ರೀವಾಸ್ತವ ಗೋಸ್ವಾಮಿ ಖಾತೆ ತೆರೆಯಲು ವಿಫಲರಾದರು.

ಆಗ ಜೊತೆಗೂಡಿದ ವಿರಾಟ್-ಮನೋಜ್ ಪವರ್-ಪ್ಲೇನಲ್ಲಿ 59 ರನ್ ಕಲೆ ಹಾಕಿ ಉತ್ತರ ವಲಯದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 149 ರನ್ ಜೊತೆಯಾಟ ನಡೆಸಿದ ವಿರಾಟ್ ಹಾಗೂ ಮನೋಜ್ ಇನ್ನೂ 21 ಎಸೆತಗಳು ಬಾಕಿಯಿರುವಾಗಲೇ ತಂಡಕ್ಕೆ ಗೆಲುವು ತಂದರು.

 ಒಂದು ವೇಳೆ ಪೂರ್ವ ವಲಯ ತಂಡ ಶನಿವಾರ(ಫೆ.18) ಕೊನೆಯ ಪಂದ್ಯದಲ್ಲಿ ಪಶ್ಚಿಮ ವಲಯ ವಿರುದ್ಧದ ಪಂದ್ಯವನ್ನು ಜಯಿಸಿದರೆ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ. ಪೂರ್ವ ವಲಯ ಪಶ್ಚಿಮ ವಲಯದ ವಿರುದ್ಧ ಸೋಲನುಭವಿಸಿ, ಮತ್ತೊಂದು ಪಂದ್ಯದಲ್ಲಿ ಕೇಂದ್ರ ವಲಯ ದಕ್ಷಿಣ ವಲಯದ ವಿರುದ್ಧ ಸೋತರೆ, ಪೂರ್ವ ವಲಯಕ್ಕೆ ಟ್ರೋಫಿ ಒಲಿಯಲಿದೆ. ಒಂದು ವೇಳೆ ಕೇಂದ್ರ ವಲಯ ದಕ್ಷಿಣ ವಲಯ ತಂಡವನ್ನು ಮಣಿಸಿದರೂ ನೆಟ್ ರನ್‌ರೇಟ್ ಆಧಾರದಲ್ಲಿ ಪೂರ್ವ ವಲಯಕ್ಕೆ ಟ್ರೋಫಿ ಗೆಲ್ಲುವ ಅವಕಾಶವಿರುತ್ತದೆ.

ಇದಕ್ಕೆ ಮೊದಲು ಟಾಸ್ ಜಯಿಸಿದ ಉತ್ತರ ವಲಯ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಶಿಖರ್ ಧವನ್(20) ಹಾಗೂ ಗೌತಮ್ ಗಂಭೀರ್(20) 3.4 ಓವರ್‌ಗಳಲ್ಲಿ 31 ರನ್ ಸೇರಿಸಿ ಉತ್ತರ ವಲಯಕ್ಕೆ ಬಿರುಸಿನ ಆರಂಭವನ್ನು ನೀಡಿದ್ದರು. ಆದರೆ, ಈ ಇಬ್ಬರು ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು. ಬ್ಯಾಟಿಂಗ್ ಪಿಚ್‌ನಲ್ಲಿ ಉತ್ತರ ವಲಯ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು.

ಕಳೆದ 3 ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಯುವರಾಜ್ ಸಿಂಗ್ 24 ಎಸೆತಗಳಲ್ಲಿ 4 ಸಿಕ್ಸರ್‌ಗಳ ಸಹಿತ 38 ರನ್ ಗಳಿಸಿ ಔಟಾದರು.ಇದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರಾಗಿದೆ.

ಯುವರಾಜ್ ಔಟಾದ ಬೆನ್ನಿಗೆ ಕುಸಿತ ಕಂಡ ಉತ್ತರವಲಯ 16ನೆ ಓವರ್‌ನಲ್ಲಿ 117 ರನ್‌ಗೆ 7 ವಿಕೆಟ್ ಪತನಗೊಂಡವು. ಪ್ರಗ್ಯಾನ್ ಓಜಾ(3-33) ಮೂರು ವಿಕೆಟ್‌ಗಳನ್ನು ಉರುಳಿಸಿದರು.

ಪ್ರದೀಪ್ ಸಾಂಗ್ವಾನ್(21 ರನ್, 14 ಎಸೆತ,3 ಬೌಂಡರಿ) ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸುವುದರೊಂದಿಗೆ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್

ಉತ್ತರ ವಲಯ: 20 ಓವರ್‌ಗಳಲ್ಲಿ 159/9

(ಯುವರಾಜ್ ಸಿಂಗ್ 38, ಗೌತಮ್ ಗಂಭೀರ್ 20, ಶಿಖರ್ ಧವನ್ 20, ಉನ್ಮುಕ್ತ್ ಚಂದ್ 20, ಸಾಂಗ್ವಾನ್ 21, ಓಜಾ 3-33, ಅಮಿತ್ ವರ್ಮ 2-18, ಘೋಷ್ 2-27, ದಾಸ್ 2-32)

ಪೂರ್ವ ವಲಯ: 16.3 ಓವರ್‌ಗಳಲ್ಲಿ 162/2

(ವಿರಾಟ್ ಸಿಂಗ್ ಅಜೇಯ 74, ಮನೋಜ್ ತಿವಾರಿ ಅಜೇಯ 75, ಸಾಂಗ್ವಾನ್ 1-26)

ಕೊನೆಗೂ ಗೆಲುವಿನ ಖಾತೆ ತೆರೆದ ದಕ್ಷಿಣ ವಲಯ

 ಮುಂಬೈ, ಫೆ.16: ಮಾಯಾಂಕ್ ಅಗರವಾಲ್(70 ರನ್) ಆಕರ್ಷಕ ಅರ್ಧಶತಕದ ನೆರವಿನಿಂದ ದಕ್ಷಿಣ ವಲಯ ತಂಡ ಪಶ್ಚಿಮ ವಲಯವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿತು.ಈ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆಯಿತು.

 ಮೊದಲು ಬ್ಯಾಟಿಂಗ್ ಮಾಡಿದ್ದ ಪಶ್ಚಿಮ ವಲಯ ದಕ್ಷಿಣ ವಲಯದ ವೇಗದ ಬೌಲರ್ ಚಾಮಾ ಮಿಲಿಂದ್(3-41),ನಾಯಕ ವಿಜಯ್ ಶಂಕರ್(2-21) ಹಾಗೂ ಮುರುಗನ್ ಅಶ್ವಿನ್(2-24) ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾಯಿತು.

ರಣಜಿ ಟ್ರೋಫಿಯಲ್ಲಿ ಮಿಂಚಿರುವ ಪಾರ್ಥಿವ್ ಪಟೇಲ್ ಹಾಗೂ ಕೇದಾರ್ ಜಾಧವ್ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ದೀಪಕ್ ಹೂಡ 32 ರನ್ ಗಳಿಸಿ ಗಮನ ಸೆಳೆದರು.

ಗೆಲ್ಲಲು ಸುಲಭ ಸವಾಲು ಪಡೆದಿದ್ದ ದಕ್ಷಿಣ ವಲಯಕ್ಕೆ ಮಾಯಾಂಕ್ ಹಾಗೂ ವಿಷ್ಣು ವಿನೋದ್ ಉತ್ತಮ ಆರಂಭ ನೀಡಿದರು. ದಕ್ಷಿಣ ವಲಯ ಮೊದಲ 6 ಓವರ್‌ಗಳಲ್ಲಿ 53 ರನ್ ಗಳಿಸಿತು. 11ನೆ ಓವರ್‌ನಲ್ಲಿ 33 ಎಸತಗಳಲ್ಲಿ ಅರ್ಧಶತಕ ಬಾರಿಸಿದ ಮಾಯಾಂಕ್ ದಕ್ಷಿಣ ವಲಯ ತಂಡ 3 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡರೂ ದೈರ್ಯಗೆಡದೆ 18ನೆ ಓವರ್‌ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. 

ಸಂಕ್ಷಿಪ್ತ ಸ್ಕೋರ್

ಪಶ್ಚಿಮ ವಲಯ: 20 ಓವರ್‌ಗಳಲ್ಲಿ 140/9

(ದೀಪಕ್ ಹೂಡಾ 32, ಚಾಮಾ ಮಿಲಿಂದ್ 3-41, ವಿಜಯ್ ಶಂಕರ್ 2-21, ಎಂ.ಅಶ್ವಿನ್ 2-24)

ದಕ್ಷಿಣ ವಲಯ: 17.4 ಓವರ್‌ಗಳಲ್ಲಿ 141/5

(ಮಾಯಾಂಕ್ ಅಗರವಾಲ್ 70, ಇರ್ಫಾನ್ ಪಠಾಣ್ 1-22)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News