ಆಲ್ ಇಂಗ್ಲೆಂಡ್: ಸೈನಾ-ಸಿಂಧು ಗೆಲುವಿಗೆ ಉತ್ತಮ ಅವಕಾಶ
ಹೈದರಾಬಾದ್, ಫೆ.16: ಎಲ್ಲವೂ ಅಂದುಕೊಂಡಂತೆ ನಡೆದರೆ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್‌ಗೆ ಈ ವರ್ಷದ ಆಲ್ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆಲ್ಲುವ ಉತ್ತಮ ಅವಕಾಶವಿದೆ.
ಮಂಗಳವಾರ ಬಿಡುಗಡೆಯಾಗಿರುವ ಡ್ರಾ ಪಟ್ಟಿಯಲ್ಲಿ ಸೈನಾ, ಸಿಂಧುಗೆ ಕ್ವಾರ್ಟರ್ ಫೈನಲ್‌ಗೆ ತಲುಪುವ ಹಾದಿ ಸುಲಭವಾಗಿರುವಂತೆ ಕಂಡುಬರುತ್ತಿದೆ.
ಸೈನಾ ಟೂರ್ನಿಯ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಜಪಾನ್‌ನ ನೊರೊಮಿ ಒಕುಹರಾರನ್ನು ಎದುರಿಸಲಿದ್ದಾರೆ. ಒಕುಹರಾ ಅವರು ಸೈನಾಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಯಿಲ್ಲ. ಭುಜನೋವಿನಿಂದ ಬಳಲುತ್ತಿರುವ ಜಪಾನ್‌ನ ಯುವ ಆಟಗಾರ್ತಿ ಒಕುಹರಾ ನವೆಂಬರ್‌ನಲ್ಲಿ ಕೊನೆಯ ಬಾರಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು, ಆ ಟೂರ್ನಿಯಲ್ಲಿ ಅವರು ಮೊದಲ ಸುತ್ತಿನಲ್ಲಿ ಆಡುವುದರಿಂದ ಹಿಂದೆ ಸರಿದಿದ್ದರು.
ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮೆಟ್ಟೆ ಪೌಲ್ಸೆನ್‌ರನ್ನು ಎದುರಿಸಲಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ವಿಶ್ವದ ನಂ.1 ಆಟಗಾರ ತೈ ಝು ಯಿಂಗ್‌ರನ್ನು ಮುಖಾಮುಖಿಯಾಗುವರು. ಒಂದು ವೇಳೆ ತೈ ಅವರನ್ನು ಮಣಿಸಿದರೆ ಸೆಮಿಫೈನಲ್‌ನಲ್ಲಿ ಸೈನಾರನ್ನು ಎದುರಿಸಲಿದ್ದಾರೆ.
ಮುಖ್ಯ ಡ್ರಾನಲ್ಲಿ ಭಾರತದ ಮೂವರು ಪುರುಷ ಆಟಗಾರರಾದ ಕಿಡಂಬಿ ಶ್ರೀಕಾಂತ್, ಅಜಯ್ ಜಯರಾಮ್ ಹಾಗೂ ಎಚ್.ಎಸ್.ಪ್ರಣಯ್ ಅವರಿದ್ದಾರೆ. ವರ್ಮ ಸಹೋದರರಾದ ಸೌರಭ್ ಹಾಗೂ ಸಮೀರ್ ಕ್ವಾಲಿಫೈಯರ್‌ನ ಮೂಲಕ ಟೂರ್ನಿಯಲ್ಲಿ ಭಾಗವಹಿಸಬೇಕಾಗಿದೆ.
ಈ ವರ್ಷದ ಆಲ್ ಇಂಗ್ಲೆಂಡ್‌ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1980ರ ಚಾಂಪಿಯನ್ ಪಡುಕೋಣೆ ವಿಐಪಿ ಗೆಸ್ಟ್ ಸ್ಪೀಕರ್ ಆಗಿದ್ದು, ಮಾ.11 ಹಾಗೂ 12 ರಂದು ಲಂಡನ್‌ಗೆ ತೆರಳಲಿದ್ದಾರೆ.