ಮತ್ತೊಂದು ಸ್ಪರ್ಧೆಗೆ ಭಾರತ-ಪಾಕಿಸ್ತಾನ ಸಜ್ಜು
ಹೊಸದಿಲ್ಲಿ, ಫೆ.16: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾದ ಸೀನಿಯರ್ ತಂಡಗಳು ದೀರ್ಘ ಸಮಯದಿಂದ ಯಾವುದೇ ಪಂದ್ಯಗಳನ್ನು ಆಡಿಲ್ಲ. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸಬೇಕೆಂದು ನಡೆಸಿರುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ.
ಇದೀಗ ಜೂನಿಯರ್ ತಂಡಗಳು ಮಾ.15 ರಿಂದ 26ರ ತನಕ ಬಾಂಗ್ಲಾದೇಶದಲ್ಲಿ ನಡೆಯಲಿರುವ ಎಮರ್ಜಿಂಗ್ ಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಎಮರ್ಜಿಂಗ್ ಕಪ್‌ನಲ್ಲಿ 23 ವರ್ಷದೊಳಗಿನ ಆಟಗಾರರು ಪಾಲ್ಗೊಳ್ಳಲಿದ್ದು, ಟೂರ್ನಿಯಲ್ಲಿ ನಾಲ್ವರು ಆಟಗಾರರಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಎಮರ್ಜಿಂಗ್ ಕಪ್‌ನಲ್ಲಿ ಭಾರತ-ಪಾಕ್ ತಂಡವಲ್ಲದೆ, ಆತಿಥೇಯ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಭಾಗವಹಿಸಲಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಿಂದ ಆಯೋಜಿಸಲ್ಪಡುವ ಟೂರ್ನಿಯಲ್ಲಿ ಅಫ್ಘಾನಿಸ್ತಾನ, ಯುಎಇ, ಹಾಂಕಾಂಗ್ ಹಾಗೂ ನೇಪಾಳ ತಂಡಗಳು ಪಾಲ್ಗೊಳ್ಳುತ್ತಿವೆ.
ಐಸಿಸಿಯಲ್ಲಿ ಪೂರ್ಣ ಸದಸ್ಯತ್ವ ಹೊಂದಿರುವ ತಂಡಗಳಿಗೆ ನಾಲ್ವರು ರಾಷ್ಟ್ರೀಯ ತಂಡದ ಆಟಗಾರರನ್ನು ಕಣಕ್ಕಿಳಿಸುವ ಅವಕಾಶವಿದೆ.
‘‘ಹೌದು, ಭಾರತ ಟೂರ್ನಮೆಂಟ್‌ಗೆ ತಂಡವನ್ನು ಕಳುಹಿಸಿಕೊಡಲಿದೆ. ಇದು ಎಸಿಸಿ ಟೂರ್ನಮೆಂಟ್ ಆಗಿದೆ. ಹಾಗಾಗಿ ನಾವು ಅದರಲ್ಲಿ ಭಾಗವಹಿಸುತ್ತೇವೆ. ಇದೊಂದು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯಲ್ಲ. ಇದು ವಿಭಿನ್ನ ಸರಣಿಯಾಗಿದೆ’’ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕ್ ತಂಡಗಳು ಭಾಗವಹಿಸಲಿದ್ದು, ಚಾಂಪಿಯನ್ಸ್ ಟ್ರೋಫಿಗೆ ಮೊದಲು ಉಭಯ ತಂಡಗಳಿಗೆ ಇದು ಕೊನೆಯ ಟೂರ್ನಿಯಾಗಿದೆ.