×
Ad

ಮಾಧ್ಯಮಗಳ ವಿರುದ್ಧ ಸಾನಿಯಾ ಗರಂ

Update: 2017-02-17 23:57 IST

ಹೊಸದಿಲ್ಲಿ, ಫೆ.17: ಕೆಲವು ಮಾಧ್ಯಮಗಳು ಈಗ ನಡೆಯುತ್ತಿರುವ ಕತರ್ ಓಪನ್‌ನಲ್ಲಿ ತಾನು ಸೆಮಿಫೈನಲ್‌ಗೆ ತಲುಪಿದ್ದನ್ನು ವರದಿ ಮಾಡುವ ಬದಲು ಋಣಾತ್ಮಕ ಸುದ್ದಿಯನ್ನೇ ವೈಭವೀಕರಿಸಿವೆ ಎಂದು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಕಳೆದ ವಾರ ತೆರಿಗೆ ಇಲಾಖೆ ತೆರಿಗೆ ವಂಚನೆ ವಿಷಯಕ್ಕೆ ಸಂಬಂಧಿಸಿ ನೋಟಿಸ್ ಜಾರಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಸಾನಿಯಾ ತಾನು ಯಾವುದೇ ತೆರಿಗೆ ವಂಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಕತರ್ ಓಪನ್‌ನಲ್ಲಿ ಝೆಕ್ ಗಣರಾಜ್ಯದ ಬಾರ್ಬೊರ ಸ್ಟೈಕೊವಾರೊಂದಿಗೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಸಾನಿಯಾ ಶುಕ್ರವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಅಮೆರಿಕ-ಸ್ಲೋವಾಕಿಯದ ಅಬಿಗೈಲ್ ಸ್ಪಿಯರ್ಸ್‌ ಹಾಗೂ ಕಟರಿನಾ ಸ್ರಿಬೊಟ್ನಿಕ್‌ರನ್ನು ಎದುರಿಸಲಿದ್ದಾರೆ.

ಕತರ್‌ನಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ತಾನು ಮಹಿಳೆಯರ ಡಬಲ್ಸ್‌ನಲ್ಲಿ ಮತ್ತೊಮ್ಮೆ ಸೆಮಿಫೈನಲ್ ತಲುಪಿರುವ ಬಗ್ಗೆ ಕೆಲವು ನಿರ್ದಿಷ್ಟ ಮಾಧ್ಯಮಗಳು ವರದಿ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ಅವುಗಳಲ್ಲಿ ತೆರಿಗೆ ವಂಚನೆ ಬಗ್ಗೆ ನೂರಾರು ಲೇಖನಗಳಿದ್ದವು. ಅದರಲ್ಲಿ ಕೆಲವೊಂದು ಅರ್ಥವಾಗಲೇ ಇಲ್ಲ ಎಂದು ಸಾನಿಯಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಸಾಧನೆೆಗಳಂತಹ ಧನಾತ್ಮಕ ಸುದ್ದಿಗಳಿಗಿಂತ ಋಣಾತ್ಮಕ ಸುದ್ದಿಗಳೇ ಹೆಚ್ಚು ಮಾರಾಟವಾಗುತ್ತಿವೆ ಎಂದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಾನಿಯಾ ಹೇಳಿದ್ದಾರೆ.

ಸೇವಾತೆರಿಗೆ ವಿಭಾಗ ಸಾನಿಯಾ ಮಿರ್ಝಾಗೆ ನೋಟಿಸ್ ಜಾರಿಗೊಳಿಸಿ ಫೆ.16 ರಂದು ಖುದ್ದು ಇಲ್ಲವೇ ಪ್ರತಿನಿಧಿಗಳ ಮೂಲಕ ಹಾಜರಾಗುವಂತೆ ಸೂಚಿಸಿತ್ತು. ಸಾನಿಯಾ ಪರವಾಗಿ ಅಕೌಂಟೆಂಟ್ ವಿಚಾರಣೆಗೆ ಹಾಜರಾಗಿದ್ದರು.

 ತೆಲಂಗಾಣ ಸರಕಾರ ತನಗೆ ನೀಡಿರುವ 1 ಕೋಟಿ ರೂ. ಬಹುಮಾನ ‘‘ತರಬೇತಿ ಪ್ರೋತ್ಸಾಹಧನ’’ವಾಗಿದೆ ಎಂದು ತನ್ನ ವಿರುದ್ಧ ಕೇಳಿಬಂದಿರುವ ತೆರಿಗೆ ವಂಚನೆ ಬಗ್ಗೆ ಸಾನಿಯಾ ಪ್ರತಿಕ್ರಿಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News