ಪ್ಲಿಸ್ಕೋವಾಗೆ ಕತರ್ ಓಪನ್ ಕಿರೀಟ
ದೋಹಾ(ಕತರ್), ಫೆ.18:ವೃತ್ತಿಜೀವನದಲ್ಲಿ ಮೊದಲ ಬಾರಿ ಕ್ಯಾರೊಲಿನ್ ವೊಝ್ನಿಯಾಕಿ ಅವರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಕಾರೊಲಿನಾ ಪ್ಲಿಸ್ಕೋವಾ ಕತರ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಶನಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಝೆಕ್‌ನ ಪ್ಲಿಸ್ಕೋವಾ ಅವರು ವೊಝ್ನಿಯಾಕಿ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿದರು. ಈ ಮೂಲಕ 8ನೆ ಬಾರಿ ಡಬ್ಲುಟಿಎ ಪ್ರಶಸ್ತಿ ಜಯಿಸಿದರು.
ಕಳೆದ ತಿಂಗಳು ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿರುವ ಪ್ಲಿಸ್ಕೋವಾಗೆ ಈ ವರ್ಷ ಗೆದ್ದಂತಹ ಎರಡನೆ ಪ್ರಶಸ್ತಿ ಇದಾಗಿದೆ.
24ರ ಹರೆಯದ ವಿಶ್ವದ ನಂ.3ನೆ ಆಟಗಾರ್ತಿ ಪ್ಲಿಸ್ಕೋವಾ ಕತರ್‌ನಲ್ಲಿ ಮೊದಲ ಬಾರಿ ಪ್ರಶಸ್ತಿಯನ್ನು ಜಯಿಸುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಸಾಮರ್ಥ್ಯ ತನಗಿದೆ ಎಂದು ತೋರಿಸಿಕೊಟ್ಟಿದ್ದಾರೆ.
‘‘ಇದೊಂದು ಅದ್ಭುತ ಅನುಭವ. ಟೂರ್ನಮೆಂಟ್‌ನ್ನು ಜಯಿಸಿರುವುದು ನನ್ನ ಪಾಲಿಗೆ ದೊಡ್ಡ ಸಾಧನೆ. ಈ ವಾರ ನನಗೆ ಅಸಾಮಾನ್ಯವಾಗಿತ್ತು’’ ಎಂದು ಪ್ಲಿಸ್ಕೋವಾ ಪ್ರತಿಕ್ರಿಯಿಸಿದರು.
ಕಳೆದ ವಾರಾಂತ್ಯದಲ್ಲಿ ಹಾಲಿ ಚಾಂಪಿಯನ್ ಝೆಕ್ ಗಣರಾಜ್ಯ ತಂಡ ಫೆಡ್ ಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಲು ನೆರವಾಗಿದ್ದ ಪ್ಲಿಸ್ಕೋವಾ ಫೆಡ್‌ಕಪ್‌ನಿಂದ ನೇರವಾಗಿ ಕತರ್‌ಗೆ ಆಗಮಿಸಿದ್ದರು.
ಒದ್ದೆ ಅಂಗಳದಿಂದಾಗಿ ಫೈನಲ್ ಪಂದ್ಯ ವಿಳಂಬವಾಗಿ ಆರಂಭಗೊಂಡಿತ್ತು. ಮತ್ತೊಂದೆಡೆ ವೊಝ್ನಿಯಾಕಿ ಕತರ್ ಓಪನ್‌ನ ಫೈನಲ್‌ನಲ್ಲಿ ಎರಡನೆ ಬಾರಿ ಸೋತಿದ್ದಾರೆ. 2011ರಲ್ಲಿ ರಶ್ಯದ ವೆರಾ ರೊನರೇವಾ ವಿರುದ್ಧ ನೇರ ಸೆಟ್‌ಗಳಿಂದ ಸೋತಿದ್ದರು. ಕಳೆದ ಒಂದುವಾರದಿಂದ ಕತರ್‌ನಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಸುರಿದ ಕಾರಣ ಎಲ್ಲ ಪಂದ್ಯಗಳ ಆರಂಭ ವಿಳಂಬವಾಗಿತ್ತು
ಸಾನಿಯಾ-ಸ್ಟ್ರೈಕೋವಾ ಜೋಡಿಗೆ ಸೋಲು:
ದೋಹಾ(ಕತರ್), ಫೆ.18: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಅವರ ಝೆಕ್ ಗಣರಾಜ್ಯದ ಜೊತೆಗಾರ್ತಿ ಬಾರ್ಬೊರ ಸ್ಟ್ರೈಕೋವಾ ಇಲ್ಲಿ ನಡೆಯುತ್ತಿರುವ ಕತರ್ ಓಪನ್‌ನ ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.
ಇಲ್ಲಿ ಶುಕ್ರವಾರ ಸಂಜೆ ಒಂದು ಗಂಟೆ, 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಿರ್ಝಾ ಹಾಗೂ ಸ್ಟ್ರೈಕೋವಾ ನಾಲ್ಕನೆ ಶ್ರೇಯಾಂಕದ ಅಮೆರಿಕದ ಅಬಿಗೈಲ್ ಸ್ಪಿಯರ್ಸ್ ಹಾಗೂ ಸ್ಲೋವೇನಿಯದ ಕಟರಿನಾ ಸ್ರೆಬೊಟ್ನಿಕ್ ವಿರುದ್ಧ 3-6, 6-1, 8-10 ಸೆಟ್‌ಗಳ ಅಂತರದಿಂದ ಶರಣಾದರು.
ಮೊದಲ ಸೆಟ್‌ನ್ನು ಸೋತ ಬಳಿಕ ಚೇತರಿಸಿಕೊಂಡ ಇಂಡೋ-ಝೆಕ್ ಜೋಡಿ ಎರಡನೆ ಸೆಟ್‌ನ್ನು ಗೆದ್ದುಕೊಂಡು ತಿರುಗೇಟು ನೀಡಿ ಪಂದ್ಯವನ್ನು ಟ್ರೈ-ಬ್ರೇಕ್‌ನತ್ತ ಕೊಂಡೊಯ್ದಿತು. ಆದರೆ, ಮೂರನೆ ಸೆಟ್‌ನ್ನು 10-8 ಅಂತರದಿಂದ ಜಯಿಸಿದ ಅಮೆರಿಕ-ಸ್ಲೋವಾನಿಯ ಜೋಡಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಸಾನಿಯಾ ಹಾಗೂ ಸ್ಟ್ರೈಕೋವಾ ವರ್ಷದ ಮೊದಲ ಗ್ರಾನ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್‌ನ ಬಳಿಕ ಆಡಿರುವ ಮೊದಲ ಟೂರ್ನಿ ಇದಾಗಿದೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಾನಿಯಾ-ಸ್ಟ್ರೈಕೋವಾ ಮೂರನೆ ಸುತ್ತಿನಲ್ಲಿ ಜಪಾನ್‌ನ ಶ್ರೇಯಾಂಕರಹಿತ ಜೋಡಿ ಎರಿ ಹೊಝುಮಿ ಹಾಗೂ ಇಯು ಕಾಟೊ ವಿರುದ್ಧ ಸೋತಿದ್ದರು.