ಸ್ಮಿತ್ ನೇತೃತ್ವದ ಆಸೀಸ್ ತಂಡ ಅತ್ಯಂತ ದುರ್ಬಲ: ಹರ್ಭಜನ್ ಸಿಂಗ್
ಹೊಸದಿಲ್ಲಿ, ಫೆ.18: ಭಾರತಕ್ಕೆ ಈ ತನಕ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯ ತಂಡಗಳ ಪೈಕಿ ಸ್ಟೀವನ್ ಸ್ಮಿತ್ ನೇತೃತ್ವದ ಹಾಲಿ ತಂಡ ‘‘ಅತ್ಯಂತ ದುರ್ಬಲ’’ವಾಗಿದೆ ಎಂದು ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಫೆ.23 ರಿಂದ ಪುಣೆಯಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿರುವ ಹರ್ಭಜನ್,‘‘ನಾನು ಆಸ್ಟ್ರೇಲಿಯದ ಶ್ರೇಷ್ಠ ತಂಡಗಳ ವಿರುದ್ಧ ಆಡಿದ್ದೇನೆ. ನನ್ನ ಪ್ರಕಾರ ಭಾರತದ ಪ್ರವಾಸದಲ್ಲಿರುವ ಈಗಿನ ಆಸೀಸ್ ತಂಡ ಅತ್ಯಂತ ದುರ್ಬಲವಾಗಿದೆ. ಭಾರತದ ಪಿಚ್‌ನಲ್ಲಿ ಆಸೀಸ್ ತಂಡ ಉತ್ತಮ ಪ್ರದರ್ಶನ ನೀಡಲಿದೆಯೆಂಬ ವಿಶ್ವಾಸ ನನಗಿಲ್ಲ’’ಎಂದು ಹರ್ಭಜನ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸ್ವದೇಶಿ ಸರಣಿಯಲ್ಲಿ ಭಾರತ ವಿರುದ್ಧ 0-4 ಅಂತರದಿಂದ ಸೋತಿರುವ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಗಿಂತ ಬಲಿಷ್ಠವಾಗಿದೆ ಎಂದು ಹೇಳಿದ ‘ಟರ್ಬನೇಟರ್’ ಖ್ಯಾತಿಯ ಸಿಂಗ್,‘‘ಇತ್ತೀಚೆಗೆ ಭಾರತಕ್ಕೆ ಪ್ರವಾಸಕೈಗೊಂಡಿದ್ದ ಇಂಗ್ಲೆಂಡ್ ತಂಡ ನನ್ನ ಪ್ರಕಾರ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿತ್ತು. ಹಲವು ಬಾರಿ 400ಕ್ಕೂ ಅಧಿಕ ರನ್ ಗಳಿಸಿದೆ. ಆದರೆ, ಆಸ್ಟ್ರೇಲಿಯ ತಂಡದಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸುವಂತಿಲ್ಲ’’ ಎಂದು ಹೇಳಿದರು.