ವೃತ್ತಿಪರ ಬಾಕ್ಸಿಂಗ್‌ಗೆ ಅಖಿಲ್ ಕುಮಾರ್, ಜಿತೇಂದರ್ ಕುಮಾರ್
ಹೊಸದಿಲ್ಲಿ, ಫೆ.18: ಮಾಜಿ ಕಾಮನ್‌ವೆಲ್ತ್ ಚಾಂಪಿಯನ್ ಅಖಿಲ್ ಕುಮಾರ್ ಹಾಗೂ ಏಷ್ಯನ್ ಚಾಂಪಿಯನ್ ಜಿತೇಂದರ್ ಕುಮಾರ್ ವೃತ್ತಿಪರ ಬಾಕ್ಸಿಂಗ್‌ಗೆ ಪ್ರವೇಶಿಸುವ ಮೂಲಕ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ವಿಜೇಂದರ್ ಸಿಂಗ್ ಹೆಜ್ಜೆಯನ್ನು ಹಿಂಬಾಲಿಸಿರುವ ಕುಮಾರ್‌ದ್ವಯರು ಎಪ್ರಿಲ್ 1 ರಂದು ಮುಂಬೈನಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಕಾಲಿಡಲಿದ್ದಾರೆ.
ಚೊಚ್ಚಲ ಪಂದ್ಯದಲ್ಲಿ ನಾಲ್ಕು ಸುತ್ತಿನ ಸ್ಪರ್ಧೆಯನ್ನಾಡುವ ಮೂಲಕ ಬಾಕ್ಸರ್‌ಗಳು ಈ ವರ್ಷ ಆರು ಪಂದ್ಯಗಳನ್ನು ಆಡಲಿದ್ದಾರೆ. 2008ರ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಖಿಲ್-ಜಿತೇಂದರ್ ಎಪ್ರಿಲ್ 1 ರಂದು ವಿಜೇಂದರ್ ಅವರು ಸ್ಪರ್ಧಿಸಲಿರುವ ಡಬಲ್ ಏಷ್ಯನ್ ಟೂರ್ನಿಯಲ್ಲಿ ಆಡಲಿದ್ದಾರೆ.
ಅಖಿಲ್ ಸೂಪರ್ ಲೈಟ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸಿದರೆ, ಜಿತೇಂದರ್ ಸೂಪರ್ ಫೆದರ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ‘‘ನಾವಿಬ್ಬರೂ ಕೆಲವು ಸಮಯದಿಂದ ಅಭ್ಯಾಸ ನಡೆಸುತ್ತಿದ್ದು, ನಮ್ಮ ಚೊಚ್ಚಲ ವೃತ್ತಿಪರ ಬಾಕ್ಸಿಂಗ್‌ಗೆ ಹೆಚ್ಚು ಸಮಯವಿಲ್ಲ ಎಂದು ನಮಗೆ ಗೊತ್ತಿದೆ. ತಕ್ಷಣವೇ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡುವ ಅನುಭವ ನಮಗಿದೆ’’ ಎಂದು ಅಖಿಲ್ ಹೇಳಿದ್ದಾರೆ.
ಹರ್ಯಾಣದ ಬಾಕ್ಸರ್‌ಗಳು ಶನಿವಾರ ಐಒಎಸ್ ಬಾಕ್ಸಿಂಗ್ ಪ್ರೊಮೊಶನ್ಸ್‌ನೊಂದಿಗೆ ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಖಿಲ್ ಹಾಗೂ ಜಿತೇಂದರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತರಾಗಿದ್ದು, ಹರ್ಯಾಣದ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಬಳಿಕ ವೃತ್ತಿಪರ ಬಾಕ್ಸಿಂಗ್‌ಗೆ ಪ್ರವೇಶಿಸಿದ್ದಾರೆ.
ಗುರ್ಗಾಂವ್‌ನಲ್ಲಿ ಐಒಎಸ್ ನಿರ್ಮಿಸಿರುವ ಅಕಾಡಮಿಯನ್ನು ಇಬ್ಬರು ಬಾಕ್ಸರ್‌ಗಳು ತರಬೇತಿ ನಡೆಸಲಿದ್ದು, ಮ್ಯಾಂಚೆಸ್ಟರ್‌ನ ತರಬೇತಿದಾರರು ತಿಂಗಳಾಂತ್ಯದಲ್ಲಿ ಈ ಇಬ್ಬರನ್ನು ಸೇರಿಕೊಳ್ಳಲಿದ್ದಾರೆ.