×
Ad

ವಿಶ್ವಕಪ್ ಕ್ರಿಕೆಟ್ ಅರ್ಹತಾ ಟೂರ್ನಿ ಫೈನಲ್ ;ಭಾರತದ ವನಿತೆಯರಿಗೆ ರೋಚಕ ಜಯ

Update: 2017-02-21 23:55 IST

ಕೊಲಂಬೊ, ಫೆ.21: ಮಹಿಳೆಯರ ವಿಶ್ವಕಪ್ ಅರ್ಹತಾ ಟೂರ್ನಿಯ ಫೈನಲ್‌ನಲ್ಲಿ ಇಂದು ದಕ್ಷಿಣ ಆಫ್ರಿಕ ವಿರುದ್ಧ ಭಾರತ 1 ವಿಕೆಟ್ ಅಂತರದ ರೋಚಕ ಜಯ ಗಳಿಸಿದೆ.

ಪಿ.ಸಾರಾ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 245 ರನ್‌ಗಳ ಸವಾಲನ್ನು ಪಡೆದ ಭಾರತದ ವನಿತೆಯರ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಇದರೊಂದಿಗೆ ಭಾರತ ಟೂರ್ನಿಯಲ್ಲಿ ಸೋಲರಿಯದ ಅಜೇಯ ತಂಡವಾಗಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
 ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್‌ಗಳ ಆವಶ್ಯಕತೆ ಇತ್ತು. ಹಂಗಾಮಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಗತ್ಯದ ರನ್ ದಾಖಲಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು. ಅವರು ಔಟಾಗದೆ 41 ರನ್(74ನಿ, 41ಎ, 2ಬೌ,1ಸಿ) ಗಳಿಸಿದರು.
 ತಂಡದ ಪರ ಆಲ್‌ರೌಂಡ್ ಪ್ರದರ್ಶನ ನೀಡಿದ ದೀಪ್ತಿ ಶರ್ಮ ಪಂದ್ಯಶ್ರೇಷ್ಠ ಮತ್ತು ದಕ್ಷಿಣ ಆಫ್ರಿಕದ ಸುನೆ ಲೂಯಿಸ್ ಸರಣಿಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾದರು.
 ಭಾರತ ಮೊದಲ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತ್ತು. ಆರಂಭಿಕ ಆಟಗಾರ್ತಿ ತಿರುಶಿ ಕಾಮಿನಿ 10 ರನ್ ಗಳಿಸಿ ಔಟಾದರು. ಎರಡನೆ ವಿಕೆಟ್‌ಗೆ ಮೊನಾ ಮೆಶ್ರಮ್ ಮತ್ತು ದೀಪ್ತಿ ಶರ್ಮ 124 ರನ್‌ಗಳ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಶರ್ಮ 99 ನಿಮಿಷಗಳ ಬ್ಯಾಟಿಂಗ್‌ನಲ್ಲಿ 89 ಎಸೆತಗಳನ್ನು ಎದುರಿಸಿದರು. 8 ಬೌಂಡರಿಗಳ ಸಹಾಯದಿಂದ 71 ರನ್ ಸೇರಿಸಿ ನಿರ್ಗಮಿಸಿದರು.
ಮೆಶ್ರಮ್ 59 ರನ್ (139ನಿ, 82ಎ, 7ಬೌ,1ಸಿ) ಗಳಿಸಿದರು. ಇವರು ಔಟಾದ ಬಳಿಕ ಹಂಗಾಮಿ ನಾಯಕಿ ಕೌರ್ ಕ್ರೀಸ್‌ಗೆ ಆಗಮಿಸಿದರು. ಕೌರ್ ಮತ್ತು ವೇದಾ ಕೃಷ್ಣಮೂರ್ತಿ 4ನೆ ವಿಕೆಟ್‌ಗೆ 38 ರನ್ ಸೇರಿಸಿದರು. ಕೃಷ್ಣ ಮೂರ್ತಿ 31 ರನ್ ಗಳಿಸಿ ಔಟಾದರು.
 ಅಗ್ರ ಸರದಿಯ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ ಔಟಾದ ಬಳಿಕ ತಂಡದ ಕುಸಿತದ ಹಾದಿ ಹಿಡಿಯಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ, ಇನ್ನೊಂದು ತುದಿಯಲ್ಲಿ ಕೌರ್ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟಿಂಗ್ ನಡೆಸಿದರು.
  ಭಾರತ ಅಂತಿಮ 6 ಓವರ್‌ಗಳಲ್ಲಿ 36 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಮಧ್ಯಮ ವೇಗಿ ಅಯಬೊಂಗ ಖಾಕ ಬೇಗನೆ ಎರಡು ವಿಕೆಟ್‌ಗಳನ್ನು ಉರುಳಿಸಿ ಭಾರತವನ್ನು ಒತ್ತಡಕ್ಕೆ ಸಿಲುಕಿಸಿದರು. ಭಾರತ 49.1 ಓವರ್‌ನಲ್ಲಿ 9 ವಿಕೆಟ್ ನಷ್ಟದಲ್ಲಿ 237 ರನ್ ಗಳಿಸಿದ್ದ ಭಾರತ ಗೆಲುವಿನ ಹಾದಿಯಲ್ಲಿ ಮುಗ್ಗರಿಸುವ ಸಾಧ್ಯತೆ ಇತ್ತು.ಲೆಟ್‌ಸೊಲೊ ಅವರ ಮೊದಲ ಎಸೆತದಲ್ಲಿ ಪೂನಮ್ ಯಾದವ್ ರನೌಟಾದಾಗ ಕೌರ್ ಒತ್ತಡಕ್ಕೆ ಸಿಲುಕಲಿಲ್ಲ. ಉಳಿದ ಮೂರು ಎಸೆತಗಳಲ್ಲಿ ರನ್ ಗಳಿಸುವ ಗೋಜಿಗೆ ಹೋಗದೆ ಎಚ್ಚರಿಕೆಯಿಂದ ಆಡಿದ ಕೌರ್ ಕೊನೆಯ ಎರಡು ಎಸೆತಗಳಲ್ಲಿ 1 ಸಿಕ್ಸರ್ ಇರುವ 8 ರನ್ ಕಬಳಿಸಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು. ಭಾರತವನ್ನು ಗೆಲುವಿನ ದಡ ಸೇರಿಸಿದರು.
ಹರ್ಮನ್‌ಪ್ರೀತ್ ಕೌರ್ ಆಸ್ಟ್ರೇಲಿಯದಲ್ಲಿ ಮಹಿಳೆಯರ ಬಿಗ್ ಬ್ಯಾಶ್ ಲೀಗ್(ಬಿಬಿಎಲ್)ನಲ್ಲಿ ಆಡಿದ್ದರು. ಒತ್ತಡದ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಆಡಬೇಕೆನ್ನುವುದನ್ನು ಚೆನ್ನಾಗಿ ಅರಿತುಕೊಂಡಿದ್ದರು. ಅವರು ಗಳಿಸಿದ ಅನುಭವ ನೆರವಿಗೆ ಬಂತು. ದಕ್ಷಿಣ ಆಫ್ರಿಕದ ಮರಿಝನ್ನೆ ಕಪ್ಪ್ 36ಕ್ಕೆ 2 ಮತ್ತು ಖಾಕ 55ಕ್ಕೆ 2 ವಿಕೆಟ್ ಪಡೆದರು. ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ಬ್ಯಾಟಿಂಗ್ ಆಯ್ದುಕೊಂಡಿತ್ತು. ಭಾರತದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್‌ವಾಡ್ (51ಕ್ಕೆ 3), ಮಧ್ಯಮ ವೇಗಿ ಶಿಖಾ ಪಾಂಡೆ (41ಕ್ಕೆ 2) , ಎಕ್ತಾ ಬಿಸ್ತ್ (39ಕ್ಕೆ 1), ಪೂನಮ್ ಯಾದವ್ (37ಕ್ಕೆ 1) ಮತ್ತು ದೀಪ್ತಿ ಶರ್ಮ(46ಕ್ಕೆ 1) ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ 49.4 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲೌಟಾಗಿತ್ತು.

 ದಕ್ಷಿಣ ಆಫ್ರಿಕದ ಮಿಗ್ನಾನ್ ಡು ಪ್ರೀಝ್ (40), ಲಿಝ್ಲೆ ಲೀ (37), ನಾಯಕಿ ಡ್ಯಾನೆ ವ್ಯಾನ್ ನಿಯೆಕ್ರೆಕ್ (37), ಮತ್ತು ಸುನೆ ಲೂಯಿಸ್ (35) ಎರಡಂಕೆಯ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
     ದಕ್ಷಿಣ ಆಫ್ರಿಕದ ಮಹಿಳೆಯರ ತಂಡ 49.4 ಓವರ್‌ಗಳಲ್ಲಿ ಆಲೌಟ್ 244 ( ಪ್ರೀಝ್ 40, ಲಿಝ್ಲೆ ಲೀ 37, ನಿಯೆಕ್ರೆಕ್ 37, ಸುನೆ ಲೂಯಿಸ್ 35; ಗಾಯಕ್‌ವಾಡ್ 51ಕ್ಕೆ 3, ಪಾಂಡೆ 41ಕ್ಕೆ 2).
   ಭಾರತದ ಮಹಿಳೆಯರ ತಂಡ 50 ಓವರ್‌ಗಳಲ್ಲಿ 245/9( ದೀಪ್ತಿ 71, ಮೆಶ್ರಮ್ 59, ಕೌರ್ ಔಟಾಗದೆ 41; ಮರಿಝನ್ನೆ 36ಕ್ಕೆ 2 , ಖಾಕ 55ಕ್ಕೆ 2)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News