×
Ad

ಕರ್ನಾಟಕ ತಂಡಕ್ಕೆ ಮನೀಷ್ ಪಾಂಡೆ ನಾಯಕ

Update: 2017-02-21 23:55 IST

ಬೆಂಗಳೂರು, ಫೆ.21: ಖಾಯಂ ನಾಯಕ ವಿನಯಕುಮಾರ್ ಅನುಪಸ್ಥಿತಿಯಲ್ಲಿ ಮನೀಷ್ ಪಾಂಡೆ ಮುಂಬರುವ ವಿಜಯ ಹಝಾರೆ ಕ್ರಿಕೆಟ್ ಟ್ರೋಫಿಯ ಗ್ರೂಪ್ ಹಂತದಲ್ಲಿ ಕರ್ನಾಟಕ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ವಿನಯಕುಮಾರ್ ಗಾಯದ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಾಂಡೆಗೆ ನಾಯಕತ್ವ ಜವಾಬ್ದಾರಿ ಲಭಿಸಿದೆ. ಕರ್ನಾಟಕದ ಪ್ರಮುಖ ವಿಕೆಟ್‌ಕೀಪರ್ ಸಿ.ಎಂ. ಗೌತಮ್ ಟೆನಿಸ್ ಎಲ್ಬೊ ಸಮಸ್ಯೆಯಿಂದಾಗಿ 50 ಓವರ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಅಲಭ್ಯರಾಗಿದ್ದು, ಗಾಯದ ಸಮಸ್ಯೆಯಿಂದಾಗಿ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಿಂದ ಹೊರಗುಳಿದಿದ್ದ ರಾಬಿನ್ ಉತ್ತಪ್ಪ ತಂಡಕ್ಕೆ ವಾಪಸಾಗಿದ್ದಾರೆ. ಉತ್ತಪ್ಪ ವಿಕೆಟ್‌ಕೀಪಿಂಗ್ ನಡೆಸುವ ಸಾಧ್ಯತೆಯಿದೆ.

ವಿನಯ್ ಹಾಗೂ ಗೌತಮ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಟೂರ್ನಿಯ ನಾಕೌಟ್ ಹಂತದಲ್ಲಿ ಕರ್ನಾಟಕ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಕರ್ನಾಟಕ ತಂಡ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅಭಿನವ್ ಮಿಥುನ್ ಹಾಗೂ ಡೇವಿಡ್ ಮಥಾಯಿಸ್ ಸೇವೆಯಿಂದಲೂ ವಂಚಿತವಾಗಿದೆ.

ಗಾಯದ ಸಮಸ್ಯೆಯಿಂದಾಗಿ ಟ್ವೆಂಟಿ-20 ಟೂರ್ನಿಯಿಂದ ದೂರವುಳಿದಿದ್ದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ತಂಡಕ್ಕೆ ವಾಪಸಾಗಿದ್ದಾರೆ. ಶ್ರೇಯಸ್ ಗೋಪಾಲ್, ಲೆಗ್ ಸ್ಪಿನ್ನರ್, ಬ್ಯಾಟ್ಸ್‌ಮನ್ ರೋಹನ್ ಕದಂ ಹಾಗೂ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ 15 ಸದಸ್ಯರ ತಂಡದಲ್ಲಿದ್ದಾರೆ.

 ಕರ್ನಾಟಕ ತಂಡ ಟೂರ್ನಿಯಲ್ಲಿ ಡಿ ಗುಂಪಿನಲ್ಲಿದ್ದು, ಜಾರ್ಖಂಡ್, ಸರ್ವಿಸಸ್, ಸೌರಾಷ್ಟ್ರ, ಜಮ್ಮು-ಕಾಶ್ಮೀರ, ಹೈದರಾಬಾದ್ ಹಾಗೂ ಛತ್ತೀಸ್‌ಗಡ ತಂಡಗಳೊಂದಿಗೆ ಸ್ಥಾನ ಪಡೆದಿದೆ.ಫೆ.25 ರಂದು ಜಾರ್ಖಂಡ್ ವಿರುದ್ಧ ಮೊದಲ ಪಂದ್ಯವನ್ನು ಹಾಗೂ ಮಾ.6 ರಂದು ಛತ್ತೀಸ್‌ಗಡ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ.

ಕರ್ನಾಟಕ ತಂಡ: ಮನೀಷ್ ಪಾಂಡೆ(ನಾಯಕ), ರಾಬಿನ್ ಉತ್ತಪ್ಪ(ವಿಕೆಟ್‌ಕೀಪರ್), ಮಾಯಾಂಕ್ ಅಗರವಾಲ್, ರವಿಕುಮಾರ್ ಸಮರ್ಥ್, ಸ್ಟುವರ್ಟ್ ಬಿನ್ನಿ, ಕೃಷ್ಣಪ್ಪ ಗೌತಮ್, ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿ, ಶ್ರೀನಾಥ್ ಅರವಿಂದ(ಉಪನಾಯಕ), ಶ್ರೇಯಸ್ ಗೋಪಾಲ್,ಜೆ. ಸುಚಿತ್, ಟಿ.ಪ್ರದೀಪ್, ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ರೋಹನ್ ಕದಂ. ಮುಖ್ಯ ಕೋಚ್: ಜೆ.ಅರುಣ್ ಕುಮಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News