×
Ad

ಭಾರತ-ಆಸ್ಟ್ರೇಲಿಯ ಸರಣಿಯಲ್ಲಿ ಎದುರಾಗಿದ್ದ ಆ ಐದು ವಿವಾದಗಳು...

Update: 2017-02-21 23:58 IST

ಹೊಸದಿಲ್ಲಿ, ಫೆ.21: ಭಾರತ ಹಾಗೂ ಆಸ್ಟ್ರೇಲಿಯ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪುಣೆಯಲ್ಲಿ ಗುರುವಾರದಿಂದ ಆರಂಭವಾಗಲಿದ್ದು, ಈ ಹಿಂದೆ ಉಭಯ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಎದುರಾದ ಪ್ರಮುಖ ಐದು ವಿವಾದಗಳ ಸುತ್ತ ಒಂದು ಅವಲೋಕನ ಇಲ್ಲಿದೆ...

*1981ರ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಸುನೀಲ್ ಗವಾಸ್ಕರ್ ವಿವಾದಿತ ವರ್ತನೆ

ಭಾರತ ತಂಡ 1981ರಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ನಾಯಕ ಸುನೀಲ್ ಗವಾಸ್ಕರ್ 70 ರನ್ ಗಳಿಸಿದ್ದಾಗ ಅಂಪೈರ್ ನೀಡಿದ್ದ ಎಲ್‌ಬಿಡಬ್ಲು ತೀರ್ಪನ್ನು ಪ್ರತಿಭಟಿಸಿದ್ದ ರೀತಿಯು ವಿವಾದಕ್ಕೆ ಕಾರಣವಾಗಿತ್ತು.

   ಗವಾಸ್ಕರ್ 70 ರನ್ ಗಳಿಸಿದ್ದಾಗ ಆಸ್ಟ್ರೇಲಿಯದ ಶ್ರೇಷ್ಠ ಬೌಲರ್ ಡೆನ್ನಿಸ್ ಲಿಲ್ಲಿ ಎಸೆತದಲ್ಲಿ ಅಂಪೈರ್ ಎಲ್ಬಿಡಬ್ಲು ತೀರ್ಪು ನೀಡಿದ್ದರು. ಚೆಂಡು ಬ್ಯಾಟ್‌ಗೆ ಮೊದಲು ತಾಗಿತ್ತು ಎಂದು ವಾದಿಸಿದ್ದ ಭಾರತದ ಬ್ಯಾಟಿಂಗ್ ಲೆಜಂಡ್ ಗವಾಸ್ಕರ್ ಅವರು ಲಿಲ್ಲಿ ಹಾಗೂ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಸಮಾಧಾನದಿಂದ ಪೆವಿಲಿಯನ್‌ನತ್ತ ನಡೆದಿದ್ದರು. ಈ ವೇಳೆ ಅವರು ಮತ್ತೊಂದು ತುದಿಯಲ್ಲಿದ್ದ ಆರಂಭಿಕ ಆಟಗಾರ ಚೇತನ್ ಚೌಹಾಣ್‌ರನ್ನು ತನ್ನೊಂದಿಗೆ ಬರುವಂತೆ ಸನ್ನೆ ಮಾಡಿದ್ದರು. ಈ ಇಬ್ಬರು ಬೌಂಡರಿ ಲೈನ್‌ನತ್ತ ತಲುಪಿದ್ದಾಗ ಅವರತ್ತ ಧಾವಿಸಿದ ಭಾರತದ ಮ್ಯಾನೇಜರ್ ಶಾಹಿದ್ ದುರಾನಿ ಚೌಹಾಣ್ ಮೈದಾನ ತೊರೆಯದಂತೆ ತಡೆದಿದ್ದರು. ವಿವಾದದಿಂದ ಕೂಡಿದ್ದ ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿದ್ದಲ್ಲದೆ ಅಮಾನತು ಶಿಕ್ಷೆಯನ್ನು ಎದುರಿಸಬೇಕಾಯಿತು.

*1999ರ ಅಡಿಲೇಡ್ ಟೆಸ್ಟ್‌ನಲ್ಲಿ ಅಂಪೈರ್ ತಪ್ಪು ತೀರ್ಪಿಗೆ ಬಲಿಯಾದ ತೆಂಡುಲ್ಕರ್

 1999ರ ಅಡಿಲೇಡ್ ಟೆಸ್ಟ್‌ನಲ್ಲಿ ಅಂಪೈರ್ ನೀಡಿರುವ ತೀರ್ಪು ಭಾರತದ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿತ್ತು. ಆ ಟೆಸ್ಟ್‌ನಲ್ಲಿ ‘ಲಿಟಲ್ ಮಾಸ್ಟರ್’ ಸಚಿನ್ ತೆಂಡುಲ್ಕರ್ ವಿರುದ್ಧ ಅಂಪೈರ್ ನೀಡಿರುವ ತೀರ್ಪು ಭಾರೀ ವಿವಾದದಿಂದ ಕೂಡಿತ್ತು. ಆ ಪಂದ್ಯದಲ್ಲಿ ತೆಂಡುಲ್ಕರ್ ವೇಗಿ ಗ್ಲೆನ್ ಮೆಕ್‌ಗ್ರಾತ್ ಎಸೆದ ಬೌನ್ಸರ್‌ನ್ನು ಡಕ್ ಮಾಡಲು ಯತ್ನಿಸಿದಾಗ ಚೆಂಡು ತೆಂಡುಲ್ಕರ್ ಭುಜಕ್ಕೆ ತಾಗಿತ್ತು. ಆದರೆ, ಟಿವಿ ರಿಪ್ಲೇಗಳು ಅಸ್ಪಷ್ಟವಾಗಿದ್ದವು. ಅಂಪೈರ್ ಔಟ್ ತೀರ್ಪು ನೀಡಿದ ಕಾರಣ ತೆಂಡುಲ್ಕರ್ ಶೂನ್ಯ ಸಂಪಾದಿಸಿದ್ದರು. ತಾನು ಔಟಾಗಿರುವ ರೀತಿ ತುಂಬಾ ಬೇಸರ ಮೂಡಿಸಿತ್ತು ಎಂದು ತೆಂಡುಲ್ಕರ್ ಪ್ರತಿಕ್ರಿಯಿಸಿದ್ದರು.

*2001ರ ಟೆಸ್ಟ್‌ನಲ್ಲಿ ಸೌರವ್ ಗಂಗುಲಿ ವರ್ತನೆಗೆ ಸ್ಟೀವ್ ವಾ ಆಕ್ರೋಶ

 ಆಸ್ಟ್ರೇಲಿಯ ತಂಡ 2001ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಆಗಿನ ಆಸ್ಟ್ರೇಲಿಯದ ನಾಯಕ ಸ್ಟೀವಾ ಅವರು ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಗಂಗುಲಿ ಅವರು ಟಾಸ್ ಸಂದರ್ಭದಲ್ಲಿ ತಡವಾಗಿ ಮೈದಾನಕ್ಕೆ ಆಗಮಿಸಿ ಸ್ಟೀವ್ ವಾ ಕೆಲವು ಹೊತ್ತು ಕಾಯುವಂತೆ ಮಾಡಿದ್ದರು.

 ಗಂಗುಲಿ ಟಾಸ್‌ಗೆ ತಡವಾಗಿ ಬರುವ ಮೂಲಕ ‘ಅಗೌರವ’ದಿಂದ ನಡೆದುಕೊಂಡಿದ್ದಾರೆ ಎಂದು ಸ್ಟೀವ್ ವಾ ಆರೋಪ ಮಾಡಿದ್ದರು. ಈ ವಿಷಯವನ್ನು ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ಸ್ಟೀವ್ ವಾ, ಗಂಗುಲಿಯವರ ಸಿಡುಕುತನ ಸ್ವಭಾವ ನನಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಹೇಳಿದ್ದರು.

ಟಾಸ್‌ಗೆ ತಡವಾಗಿ ಹೋಗಿರುವುದು ತನ್ನ ತಪ್ಪು ಎಂದು ಆರಂಭದಲ್ಲಿ ಹೇಳಿದ್ದ ಗಂಗುಲಿ ಕೆಲವು ವರ್ಷಗಳ ಬಳಿಕ ತಾನು ಉದ್ದೇಶಪೂರ್ವಕವಾಗಿ ಆ ರೀತಿ ವರ್ತಿಸಿದ್ದೆ ಎಂದಿದ್ದರು. ಕೆಟ್ಟದಾಗಿ ವರ್ತಿಸುವ ಆಸ್ಟ್ರೇಲಿಯದವರಿಗೆ ಬುದ್ದಿಕಲಿಸಲು ತಾನು ಹಾಗೆ ನಡೆಸಿಕೊಂಡಿದ್ದಾಗಿ ಗಂಗುಲಿ ಬಹಿರಂಗಪಡಿಸಿದ್ದರು.

 *2008ರ ಮಂಕಿಗೇಟ್ ಪ್ರಕರಣ:

2008ರ ಹೊಸ ವರ್ಷದಂದು ನಡೆದಿದ್ದ ಭಾರತ-ಆಸ್ಟ್ರೇಲಿಯ ನಡುವಿನ ಸಿಡ್ನಿ ಟೆಸ್ಟ್‌ನಲ್ಲಿ ನಡೆದ ಘಟನೆ ಅತ್ಯಂತ ವಿವಾದಿತ, ಕೀಳುಮಟ್ಟದಿಂದ ಕೂಡಿತ್ತು. ‘ಮಂಕಿಗೇಟ್’ ಪ್ರಕರಣ ಸರಣಿ ರದ್ದುಗೊಳಿಸುವ ಹಂತಕ್ಕೆ ತಲುಪಿಸಿತ್ತು. ಆಸ್ಟ್ರೇಲಿಯದ ಆಲ್‌ರೌಂಡರ್ ಆ್ಯಂಡ್ರೂ ಸೈಮಂಡ್ಸ್ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನನ್ನು ‘ಮಂಕಿ’ ಎಂದು ಕರೆದು ನಿಂದಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಹರ್ಭಜನ್ ಈ ಆರೋಪವನ್ನು ನಿರಾಕರಿಸಿದ್ದರು. ಆದಾಗ್ಯೂ ಜನಾಂಗೀಯ ನಿಂದನೆ ಆರೋಪದಲ್ಲಿ ಸಿಂಗ್‌ಗೆ ಮೂರು ಪಂದ್ಯಗಳಿಂದ ಅಮಾನತು ಶಿಕ್ಷೆ ಪ್ರಕಟಿಸಲಾಗಿತ್ತು. ಹರ್ಭಜನ್ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರತಿಭಟಿಸಿದ ಭಾರತ ತಂಡ ಆಸ್ಟ್ರೇಲಿಯ ಪ್ರವಾಸವನ್ನು ಬಹಿಷ್ಕರಿಸುವ ಬೆದರಿಕೆ ಹಾಕಿತ್ತು. ಕೊನೆಗೂ ವಿವಾದ ಸುಖಾಂತ್ಯವಾಗಿ ಆಸ್ಟ್ರೇಲಿಯ ಸಿಡ್ನಿ ಟೆಸ್ಟ್‌ನ್ನು ಗೆಲ್ಲುವ ಮೂಲಕ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.

 *2012ರಲ್ಲಿ ಕೊಹ್ಲಿಯಿಂದ ‘ಫಿಂಗರ್‌ಗೇಟ್’:

‘ಮಂಕಿಗೇಟ್’ ವಿವಾದ ನಡೆದ ನಾಲ್ಕು ವರ್ಷಗಳ ಬಳಿಕ ‘ಫಿಂಗರ್‌ಗೇಟ್’ ವಿವಾದ ನಡೆದಿತ್ತು. ಈ ವಿವಾದದ ಕೇಂದ್ರ ಬಿಂದು ಯುವ ಹಾಗೂ ಆಕ್ರಮಣಕಾರಿ ಆಟಗಾರ ವಿರಾಟ್ ಕೊಹ್ಲಿ. ಸಿಡ್ನಿ ಟೆಸ್ಟ್‌ನಲ್ಲಿ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯದ ಪ್ರೇಕ್ಷಕರು ಕೊಹ್ಲಿ ತಾಯಿ ಹಾಗೂ ತಂಗಿಯ ಬಗ್ಗೆ ಕೆಟ್ಟದಾಗಿ ಮಾತನಾಡಿ ಹೀಯಾಳಿಸಿದ್ದರು. ಇದರಿಂದ ಕೆರಳಿದ್ದ ಕೊಹ್ಲಿ ಪ್ರೇಕ್ಷಕರತ್ತ ಮಧ್ಯಬೆರಳನ್ನು ತೋರಿಸಿದ್ದರು. ಕೊಹ್ಲಿಯ ಈ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕ್ರಿಕೆಟ್ ಪಂದ್ಯಕ್ಕೆ ಅಗೌರವ ತೋರಿದ್ದ ಆರೋಪದಲ್ಲಿ ಕೊಹ್ಲಿಗೆ ಪಂದ್ಯಶುಲ್ಕದಲ್ಲಿ 50 ಶೇ.ದಷ್ಟು ದಂಡ ವಿಧಿಸಲಾಗಿತ್ತು.

 ಕ್ರಿಕೆಟಿಗರಲ್ಲಿ ಪ್ರತೀಕಾರದ ಭಾವನೆ ಇರಬಾರದೆಂಬ ಮಾತನ್ನು ನಾನು ಒಪ್ಪಿಕೊಳ್ಳುವೆ. ನಿಮ್ಮ ತಾಯಿ ಹಾಗೂ ಸಹೋದರಿಯರ ಬಗ್ಗೆ ಪ್ರೇಕ್ಷಕರು ಕೆಟ್ಟದಾಗಿ ಮಾತನಾಡಿದರೆ, ಕೆಟ್ಟ ಶಬ್ದಗಳನ್ನು ಕೇಳಿದಾಗ ಕೋಪ ಬರುವುದು ಸಹಜ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News