ಆದರ್ಶ ಆಟಗಾರರಿಂದ ಪಾಠ ಕಲಿಯುವ ಬಯಕೆ: ಕೆ. ಗೌತಮ್
ಬೆಂಗಳೂರು, ಫೆ.21: ಕರ್ನಾಟಕದ ರಣಜಿ ಆಟಗಾರ ಕೃಷ್ಣಪ್ಪ ಗೌತಮ್ ಪ್ರಥಮ ದರ್ಜೆ ಟೂರ್ನಮೆಂಟ್‌ಗಳಲ್ಲಿ ತೋರಿದ ವೀರೋಚಿತ ಪ್ರದರ್ಶನದ ಆಧಾರದಲ್ಲಿ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪಾಲಾಗಿರುವ ದೇಶೀಯ ಕ್ರಿಕೆಟ್‌ನ ಓರ್ವ ಅದೃಷ್ಟಶಾಲಿ ಆಟಗಾರನಾಗಿದ್ದಾರೆ.
ಇತ್ತೀಚೆಗೆ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡ ಡ್ರಾ ಸಾಧಿಸುವಲ್ಲಿ ಗೌತಮ್ ಪ್ರಮುಖ ಪಾತ್ರವಹಿಸಿದ್ದರು. ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 108.82ರ ಸರಾಸರಿಯಲ್ಲಿ 83 ಎಸೆತಗಳಲ್ಲಿ 74 ರನ್ ಗಳಿಸಿದ್ದ ಗೌತಮ್‌ರ ಈ ಬ್ಯಾಟಿಂಗ್ ಪರಾಕ್ರಮ ಸೋಮವಾರ ನಡೆದ ಐಪಿಎಲ್ ಆಟಗಾರರ ಬಿಡ್ಡಿಂಗ್‌ನಲ್ಲಿ ಅವರ ವೌಲ್ಯ ಹೆಚ್ಚಲು ಕಾರಣವಾಗಿದೆ.
10 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಬೆಂಗಳೂರಿನ ಆಟಗಾರ ಗೌತಮ್‌ರನ್ನು ಮುಂಬೈ ಇಂಡಿಯನ್ಸ್ ತಂಡ 2 ಕೋ.ರೂ. ನೀಡಿ ಖರೀದಿಸಿದೆ. ಮುಂಬೈ ಮೂಲದ ಫ್ರಾಂಚೈಸಿ ಗೌತಮ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಮೊದಲು ಇತರ ಫ್ರಾಂಚೈಸಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಿತ್ತು.
ಮುಂಬೈ ಇಂಡಿಯನ್ಸ್‌ನ ಭಾಗವಾಗಿರುವ ಗೌತಮ್ ಆ ತಂಡದಲ್ಲಿರುವ ಹಿರಿಯ ಹಾಗೂ ಆದರ್ಶ ಆಟಗಾರರಿಗೆ ಪಾಠ ಕಲಿಯುವುದನ್ನು ಎದುರು ನೋಡುತ್ತಿದ್ದಾರೆ.
‘‘ನನ್ನ ರೋಲ್ ಮಾಡಲ್ ಹರ್ಭಜನ್ ಸಿಂಗ್‌ರಿಂದ ಪಾಠ ಕಲಿಯಲು ಎದುರು ನೋಡುತ್ತಿರುವೆ’’ಎಂದು ‘ಮಿಡ್ ಡೇ’ದಿನಪತ್ರಿಕೆಗೆ ಗೌತಮ್ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಗೌತಮ್‌ರಲ್ಲದೆ ಕರಣ್ ಶರ್ಮ(3.2 ಕೋ.ರೂ.), ವೆಸ್ಟ್‌ಇಂಡೀಸ್ ವಿಕೆಟ್‌ಕೀಪರ್ ನಿಕೊಲಸ್ ಪೂರ್ನನ್, ಶ್ರೀಲಂಕಾದ ಬ್ಯಾಟ್ಸ್‌ಮನ್ ಅಸೆಲಾ ಗುಣರತ್ನರನ್ನು ಖರೀದಿಸಿದೆ. ಮುಂಬೈ ತಂಡ ಎ.6 ರಂದು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸುವುದರೊಂದಿಗೆ ಐಪಿಎಲ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.